ಹೆದ್ದಾರಿ ದರೋಡೆ ಪ್ರಕರಣ ಭೇದಿಸಲು ಸಹಾಯ ಮಾಡಿದ ಫಾಸ್ಟ್‌ಟ್ಯಾಗ್; ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಥಾಣೆ: ಮುಂಬೈ-ಪುಣೆ ಹೆದ್ದಾರಿಯಲ್ಲಿ 2.17 ಲಕ್ಷ ರೂಪಾಯಿ ಮೌಲ್ಯದ ದರೋಡೆ ಪ್ರಕರಣವನ್ನು ಭೇದಿಸಲು ಫಾಸ್ಟ್‌ಟ್ಯಾಗ್ ವ್ಯವಸ್ಥೆಯು ನವಿ ಮುಂಬೈ ಪೊಲೀಸರಿಗೆ ಸಹಾಯ ಮಾಡಿದೆ ಮತ್ತು ಈ ಸಂಬಂಧ ಆರು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಜನವರಿ 26 ರಂದು ಹೆದ್ದಾರಿಯ ಪನ್ವೇಲ್ ಪ್ರದೇಶದಲ್ಲಿ ಬಿಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಗಳು ಮತ್ತೊಂದು ಕಾರನ್ನು ಅಡ್ಡಗಟ್ಟಿದ್ದರು. ಬಳಿಕ ಕಾರಿನಲ್ಲಿದ್ದವರ ಬಳಿ 2.17 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿ ತಮ್ಮ ಕಾರಿನಲ್ಲಿ ಪರಾರಿಯಾಗಿದ್ದ ಘಟನೆ ನಡೆದಿತ್ತು ಎಂದು ಪನ್ವೇಲ್ ತಾಲೂಕು ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಅನಿಲ್ ಪಾಟೀಲ್ ತಿಳಿಸಿದ್ದಾರೆ.
ಪೊಲೀಸರು ಸಮೀಪದ ಚೆಕ್‌ಪೋಸ್ಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತ್ತು ಮತ್ತು ಆರೋಪಿಗಳು ಪ್ರಯಾಣಿಸಿದ್ದ ಬಿಳಿ ಕಾರನ್ನು ಗುರುತಿಸಿತ್ತು. ಬಳಿಕ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹದ ಪಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಪರಿಶೀಲಿಸಿದಾಗ ಕಾರು ಮತ್ತು ಅದರ ಮಾಲೀಕರ ವಿಚಾರಗಳು ಲಭಿಸಿದವು ಎಂದು ಅಧಿಕಾರಿ ತಿಳಿಸಿದ್ದಾರೆ.
ಆ ಕಾರು ಸತಾರಾ ಕಡೆಗೆ ಹೋಗುತ್ತಿದ್ದಾಗ ನಾಪತ್ತೆಯಾಗಿತ್ತು. ಪೊಲೀಸರು ಈ ಬಗ್ಗೆ ನಿಗಾ ಇರಿಸಿದ್ದರು ಮತ್ತು ಕಾರು ಹಿಂತಿರುಗಿ ಜನವರಿ 27ರಂದು ಮುಂಬೈಗೆ ತೆರಳುತ್ತಿದ್ದಾಗ ಖಲಾಪುರ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಅದನ್ನು ತಡೆದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಕಾರು ಮಾಲೀಕರ ವಿವರಗಳನ್ನು ಖಚಿತಪಡಿಸಿದ ನಂತರ, ಪೊಲೀಸರು ದರೋಡೆಯಲ್ಲಿ ಭಾಗಿಯಾಗಿರುವ ಆರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ ಎಂದು ಅವರು ಹೇಳಿದರು.
ಆರೋಪಿಗಳನ್ನು ರಾಜು ಪುಕ್ಲೆ (55), ಪ್ರಮೋದ ಕೊಕ್ರೆ (28), ಮಾಯಪ್ಪ ವಲ್ಕುಂಡೆ (24), ಕಿರಣ್ ಸರ್ಗರ್ (28), ಅಶೋಕ್ ಪಾಟೀಲ್ (23) ಮತ್ತು ಸಂದೀಪ್ ಕೊಕ್ರೆ (23) ಎಂದು ಗುರುತಿಸಲಾಗಿದೆ.
ದರೋಡೆ ಮಾಡಿದ್ದ ವಸ್ತುಗಳನ್ನು ಮರುಪಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ