ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ರಾಜೇಶ್ ಬಿಂದಾಲ್, ಅರವಿಂದ ಕುಮಾರ್ ಪ್ರಮಾಣವಚನ ಸ್ವೀಕಾರ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ರಾಜೇಶ್ ಬಿಂದಾಲ್ ಮತ್ತು ಅರವಿಂದ ಕುಮಾರ್ ಅವರು ಸೋಮವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ರಾಜೇಶ್ ಬಿಂದಾಲ್, ಅರವಿಂದ ಕುಮಾರ್.
ರಾಜೇಶ್ ಬಿಂದಾಲ್, ಅರವಿಂದ ಕುಮಾರ್.

ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ರಾಜೇಶ್ ಬಿಂದಾಲ್ ಮತ್ತು ಅರವಿಂದ ಕುಮಾರ್ ಅವರು ಸೋಮವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು, ರಾಜೇಶ್ ಬಿಂದಾಲ್ ಮತ್ತು ಅರವಿಂದ ಕುಮಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ಅಖಿಲ ಭಾರತ ಹಿರಿತನದ ಪ್ರಕಾರ, ನ್ಯಾ. ಅರವಿಂದ್‌ ಕುಮಾರ್ ಪ್ರಸ್ತುತ ಹೈಕೋರ್ಟ್ ನ್ಯಾಯಾಧೀಶರಲ್ಲಿ 26 ನೇ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಇದಲ್ಲದೆ, ಅವರು ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನಿಂದ ಬಂದಿರುವ ನ್ಯಾಯಮೂರ್ತಿಗಳಲ್ಲಿ ಎರಡನೇ ಹಿರಿಯ ನ್ಯಾಯಮೂರ್ತಿ ಎನಿಸಿಕೊಂಡಿದ್ದಾರೆ. ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ  ಕರ್ನಾಟಕ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಿದ್ದಾರೆ ಎಂಬ (ನ್ಯಾ. ಎಸ್‌ ರವೀಂದ್ರ ಭಟ್‌ ಹಾಗೂ ನ್ಯಾ. ಬಿ ವಿ ನಾಗರತ್ನ) ಕಾರಣಕ್ಕೆ ಕೊಲಿಜಿಯಂ ನ್ಯಾ. ಅರವಿಂದ್‌ ಕುಮಾರ್‌ ಅವರ ಹೆಸರನ್ನು ಪೀಠಕ್ಕೆ ಶಿಫಾರಸು ಮಾಡಿತ್ತು.

ನ್ಯಾ. ರಾಜೇಶ್ ಬಿಂದಾಲ್ ಅವರು ಮಾರ್ಚ್ 2006ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಂತಿಮವಾಗಿ 2021ರ ಅಕ್ಟೋಬರ್‌ನಲ್ಲಿ ಅಲಾಹಾಬಾದ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಹಿರಿತನದ ಪ್ರಕಾರ, ನ್ಯಾ.ಬಿಂದಾಲ್ ಅವರು ದೇಶದ ಹೈಕೋರ್ಟ್‌ ನ್ಯಾಯಮೂರ್ತಿಗಳಲ್ಲೇ ಎರಡನೇ ಅತಿ ಹಿರಿಯವರಾಗಿದ್ದಾರೆ ಎಂದು ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಮಂಡಳಿಯಾದ ಕೊಲಿಜಿಯಂ ವಿವರಿಸಿತ್ತು.

ಅವರ ಹೆಸರನ್ನು ಶಿಫಾರಸು ಮಾಡುವಾಗ, ನ್ಯಾಯಮೂರ್ತಿ ಬಿಂದಾಲ್ ಅವರ ಪೋಷಕ ಹೈಕೋರ್ಟ್ ಆಗಿರುವ ಅತಿದೊಡ್ಡ ಹೈಕೋರ್ಟ್‌ಗಳಲ್ಲಿ ಒಂದೆನಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಸುಪ್ರೀಂಕೋರ್ಟ್‌ನಲ್ಲಿ ಸಮರ್ಪಕ ಪ್ರಾತಿನಿಧ್ಯವಿರಲಿಲ್ಲ ಎಂದು ಕೊಲಿಜಿಯಂ ಹೇಳಿತ್ತು.

ಇಬ್ಬರು ನ್ಯಾಯಮೂರ್ತಿಗಳು ಪ್ರಮಾಣವಚನ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ 34ಕ್ಕೆ ಏರಿಕೆಯಾಗಿದ್ದು, ಇದರೊಂದಿಗೆ ಎಲ್ಲಾ ಸ್ಥಾನ ಭರ್ತಿ ಆದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com