ನಾಸಿಕ್-ಪುಣೆ ಹೆದ್ದಾರಿಯನ್ನು ದಾಟುತ್ತಿದ್ದ ಮಹಿಳೆಯರಿಗೆ ಎಸ್ ಯುವಿ ಡಿಕ್ಕಿ: ಐವರು ಸಾವು, ಮೂವರಿಗೆ ಗಾಯ
ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಾಸಿಕ್-ಪುಣೆ ಹೆದ್ದಾರಿಯನ್ನು ದಾಟುತ್ತಿದ್ದಾಗ ವೇಗವಾಗಿ ಬಂದ ಎಸ್‌ಯುವಿ ಡಿಕ್ಕಿ ಹೊಡೆದು ಐವರು ಮಹಿಳೆಯರು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆ ನಗರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಶಿರೋಲಿ ಗ್ರಾಮದ ಬಳಿ ರಾತ್ರಿ 10.45 ರ ಸುಮಾರಿಗೆ 17 ಮಹಿಳೆಯರ ತಂಡವು ಅಡುಗೆ ಕೆಲಸಕ್ಕಾಗಿ ಮದುವೆ ಮಂಟಪವನ್ನು ತಲುಪಲು ಹೆದ್ದಾರಿಯನ್ನು ದಾಟುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಈ ಮಹಿಳೆಯರು ಪುಣೆ ನಗರದಿಂದ ಪುಣೆ-ನಾಸಿಕ್ ಹೆದ್ದಾರಿಯ ಪಕ್ಕದಲ್ಲಿರುವ ಮದುವೆ ಮಂಟಪಕ್ಕೆ ಅಡುಗೆ ಕೆಲಸಕ್ಕಾಗಿ ಬಂದಿದ್ದರು. ಅವರು ಹೆದ್ದಾರಿ ದಾಟುತ್ತಿದ್ದಾಗ, ಎಸ್‌ಯುವಿ ಅವರ ಮೇಲೆ ಡಿಕ್ಕಿ ಹೊಡೆದಿದೆ.
ಅಪಘಾತದ ನಂತರ, ಎಸ್‌ಯುವಿ ಚಾಲಕ ಯು-ಟರ್ನ್ ತೆಗೆದುಕೊಂಡು ಪುಣೆ ಕಡೆಗೆ ಹಿಂದಿರುಗುವ ಮೊದಲು ವೇಗವಾಗಿ ಚಲಿಸಿದನು ಎಂದು ಖೇಡ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟರೆ, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮತ್ತೆ ಮೂವರು ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪರಿಚಿತ ಎಸ್‌ಯುವಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ