ಗೂಢಚಾರಿಕೆ ಪ್ರಕರಣ: ದೆಹಲಿ ಉಪ ಮುಖ್ಯಮಂತ್ರಿ ಸಿಸೋಡಿಯಾ ಸಿಬಿಐ ವಿಚಾರಣೆಗೆ ಗೃಹ ಸಚಿವಾಲಯ ಒಪ್ಪಿಗೆ!

ರಾಜಕೀಯ ಗುಪ್ತಚರ ಸಂಗ್ರಹ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಐಎಎಸ್ ಅಧಿಕಾರಿ ಸೇರಿದಂತೆ ಇತರ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ಅವರನ್ನು ತನಿಖೆಗೊಳಪಡಿಸಲು ಕೇಂದ್ರ ಗೃಹ ಸಚಿವಾಲಯವು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಅನುಮೋದನೆ ನೀಡಿದೆ. 
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ

ನವದೆಹಲಿ: ರಾಜಕೀಯ ಗುಪ್ತಚರ ಸಂಗ್ರಹ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಐಎಎಸ್ ಅಧಿಕಾರಿ ಸೇರಿದಂತೆ ಇತರ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ಅವರನ್ನು ತನಿಖೆಗೊಳಪಡಿಸಲು ಕೇಂದ್ರ ಗೃಹ ಸಚಿವಾಲಯವು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಅನುಮೋದನೆ ನೀಡಿದೆ. 

ಈ ಹಿಂದೆ ಎಎಪಿ ಸರ್ಕಾರವು 2015 ರಲ್ಲಿ ಭ್ರಷ್ಟಾಚಾರ ಪರಿಶೀಲಿಸಲು FBU (Feedback Unit) ಘಟಕವನ್ನು ಸ್ಥಾಪಿಸಿದ್ದರು. ಇದೇ ಘಟಕವನ್ನು ಮುಂದಿಟ್ಟುಕೊಂಡು ಬೇಹುಗಾರಿಕೆ ಮತ್ತು ರಾಜಕೀಯ ಗುಪ್ತಚರ ಸಂಗ್ರಹಣೆಗಾಗಿ ಬಳಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಯೋಜನೆಗೆ ಮೀಸಲಿಟ್ಟ ಹಣದ ದುರುಪಯೋಗದ ಆರೋಪವೂ ದೆಹಲಿ ಸರ್ಕಾರ ಮತ್ತು ಸಚಿವ ಸಿಸೋಡಿಯಾ ಮೇಲಿದೆ.

ಈ ಕುರಿತು ಫೆಬ್ರವರಿ 17 ರಂದು ಬರೆದ ಪತ್ರದಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಸೆಕ್ಷನ್ 17 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲು ಮತ್ತು ಈ ವಿಷಯದ ತನಿಖೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ಭಾರತದ ಪ್ರಧಾನ ತನಿಖಾ ಸಂಸ್ಥೆಗೆ ತನ್ನ ಒಪ್ಪಿಗೆಯನ್ನು ನೀಡಿತು. ಈ ತಿಂಗಳ ಆರಂಭದಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಸಿಸೋಡಿಯಾ ಮತ್ತು ಇತರರ ವಿರುದ್ಧ ಕಾನೂನುಬಾಹಿರ ಕಾನೂನು ಕ್ರಮದ ಆರೋಪಗಳಿರುವ ಕಾರಣ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿಬಿಐಗೆ ಒಪ್ಪಿಗೆ ಕೋರಿದ ನಂತರ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಯಿತು. ರಾಜಕೀಯ ಪ್ರತಿಸ್ಪರ್ಧಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ಕಣ್ಣಿಡಲು ಬೇಹುಗಾರಿಕಾ ಘಟಕಗಳ ಸ್ಥಾಪನೆ ಮತ್ತು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.

ಇದೇ ವಿಚಾರವಾಗಿ ಮಾತನಾಡಿದ ಸಕ್ಸೇನಾ ಅವರು, "ಸಾಮಾನ್ಯ ಪ್ರಕರಣವನ್ನು ದಾಖಲಿಸಿದ ನಂತರ, ಈ ವಿಷಯವನ್ನು ಸಿಬಿಐನಿಂದ ಕೂಲಂಕುಷವಾಗಿ ತನಿಖೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ಮನೀಶ್ ಸಿಸೋಡಿಯಾಗೆ ಸಂಬಂಧಿಸಿದಂತೆ ಸಿಬಿಐ ಕೋರಿಕೆಗೆ ನಾನು ಒಪ್ಪುತ್ತೇನೆ. ಸೆಕ್ಷನ್ 17A ಅಡಿಯಲ್ಲಿ 'ತನಿಖೆಗೆ' ಅನುಮತಿ ನೀಡುವುದನ್ನು ಪರಿಗಣಿಸಲು ಸಮರ್ಥ ಪ್ರಾಧಿಕಾರವಾಗಿರುವ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ರವಾನಿಸಲು ವಿಜಿಲೆನ್ಸ್ ನಿರ್ದೇಶನಾಲಯದ ಪ್ರಸ್ತಾವನೆಯನ್ನು ನಾನು ಅನುಮೋದಿಸುತ್ತೇನೆ ಎಂದು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಎಎಪಿ ಸರ್ಕಾರವು "ರಹಸ್ಯ ಸೇವಾ ನಿಧಿ"ಯನ್ನು ರಚಿಸಿದ್ದು, ಸಿಲ್ವರ್ ಶೀಲ್ಡ್ ಡಿಟೆಕ್ಟಿವ್ಸ್ ಎಂಬ ಪತ್ತೇದಾರಿ ಏಜೆನ್ಸಿಯನ್ನು ನೇಮಿಸಿಕೊಂಡಿದೆ ಎಂದು ಎಲ್-ಜಿ ಅನುಮತಿ ಕೋರಿ ತನ್ನ ಪತ್ರದಲ್ಲಿ ಸಿಬಿಐ ಆರೋಪಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com