ನವದೆಹಲಿ: ಭಾರತೀಯ ಸೇನೆ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು, ಸೇನಾಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳು ಮೊದಲು ಆನ್‌ಲೈನ್ ಪರೀಕ್ಷೆ ಬರೆಯುವುದನ್ನು ಕಡ್ಡಾಯ ಮಾಡಲಾಗಿದೆ.
ನೇಮಕಾತಿಯಲ್ಲಿ ಒಟ್ಟು ಮೂರು ಹಂತಗಳನ್ನು ಅನುಸರಿಸಲಾಗುತ್ತದೆ. ಹಂತ 1 ರಲ್ಲಿ joinindianarmy.nic.in ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಬೇಕಾಗುತ್ತದೆ.
ಹಂತ 2 ರಲ್ಲಿ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ನೇಮಕಾತಿಗೆ ಕರೆಯಲಾಗುವುದು, ಇಲ್ಲಿ ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯ ಮತ್ತು ಮಾಪನ ಪರೀಕ್ಷೆಗಳಿಗೆ ಒಳಗಾಗುತ್ತಾರೆ.
ಅಂತಿಮವಾಗಿ ಹಂತ 3 ಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ ಎಂದು ಬೆಂಗಳೂರಿನ ಪ್ರಧಾನ ನೇಮಕಾತಿ ವಲಯದ ಹೆಚ್ಚುವರಿ ನಿರ್ದೇಶಕ ಮೇಜರ್ ಜನರಲ್ ಪಿ ರಮೇಶ್ ಅವರು ಮಾಹಿತಿ ನೀಡಿದ್ದಾರೆ.
ಈ ಪ್ರಕ್ರಿಯೆಯಲ್ಲಿ, 'ಅರಿವಿನ ಅಂಶಗಳಿಗೆ' ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇದು ನೇಮಕಾತಿ ಪ್ರಕ್ರಿಯೆಯಲ್ಲಿ ಜನಸಂದಣಿಯನ್ನು ಕಡಿಮೆ ಮಾಡುತ್ತದೆ ಮತ್ತು ಆಡಳಿತಾತ್ಮಕ ಕಾರ್ಯಗಳನ್ನೂ ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ. ಪರೀಕ್ಷೆ ಕುರಿತು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲು ವಿಡಿಯೋವೊಂದನ್ನು ಭಾರತೀಯ ಸೇನೆಯ ಜಾಯ್ನ್ ವೆಬ್‌ಸೈಟ್‌ನಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ಹಾಕಲಾಗಿದೆ. ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ಶುಲ್ಕವು ಪ್ರತಿ ಅಭ್ಯರ್ಥಿಗೆ ರೂ 500 ಆಗಿದ್ದು, ಅದರಲ್ಲಿ 50 ಪ್ರತಿಶತದಷ್ಟು ವೆಚ್ಚವನ್ನು ಸೇನೆಯು ಭರಿಸುತ್ತದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ರೂ 250 ಪಾವತಿಸಬೇಕು ಮತ್ತು ಆನ್‌ಲೈನ್ ವಹಿವಾಟುಗಳಿಗಾಗಿ ಕಾರ್ಡ್‌ಗಳನ್ನು ಬಳಕೆ ಮಾಡಬಹುದಾಗಿದೆ. ಪಾವತಿಯ ಯಶಸ್ವಿಯಾದ ನಂತರ ನೇಮಕಾತಿಯ ಎಲ್ಲಾ ಹಂತಗಳಲ್ಲಿ ಬಳಸಲು ಸಂಖ್ಯೆಯೊಂದನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಮೊದಲ ಹಂತದಲ್ಲಿ ಸುಮಾರು 40,000 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ ಸುಮಾರು 2,000 ಕರ್ನಾಟಕದ ಅಭ್ಯರ್ಥಿಗಳಿರಲಿದ್ದಾರೆ. ಫೆಬ್ರವರಿ 16 ರಂದು ಆನ್‌ಲೈನ್ ನೋಂದಣಿ ಆರಂಭವಾಗಿದ್ದು, ಮಾರ್ಚ್ 15ಕ್ಕೆ ಇದು ಅಂತ್ಯಗೊಳ್ಳುತ್ತದೆ. ಪರೀಕ್ಷೆಯನ್ನು ಏಪ್ರಿಲ್ ತಿಂಗಳಿನಲ್ಲಿ 176 ಸ್ಥಳಗಳಲ್ಲಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಪರೀಕ್ಷೆ ಕುರಿತು 10-14 ದಿನಗಳಿಗೂ ಮೊದಲೇ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಳಿಗಾಗಿ ಅಭ್ಯರ್ಥಿಗಳು ಸಹಾಯವಾಣಿ 7996157222 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement