ಮಹಿಳೆಯ ಮೇಲೆ ಮೂತ್ರ ವಿಸರ್ಜನೆ: ವ್ಯಕ್ತಿಗೆ 30 ದಿನಗಳವರೆಗೆ ನಿಷೇಧ ಹೇರಿದ ಏರ್ ಇಂಡಿಯಾ
ನವದೆಹಲಿ: ಸಹ ಪ್ರಯಾಣಿಕ ಮಹಿಳೆ ಮೇಲೆ ಕುಡಿದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಪುರುಷ ಪ್ರಯಾಣಿಕನ ಮೇಲೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ 30 ದಿನಗಳ ಪ್ರಯಾಣ ನಿಷೇಧ ಹೇರಿದೆ.
ನವೆಂಬರ್ 26 ರಂದು, ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕಿಡಿಗೇಡಿಯು 70 ರ ಮಹಿಳಾ ಪ್ರಯಾಣಿಕರೊಬ್ಬರ ಎದುರು ಪ್ಯಾಂಟಿನ ಜಿಪ್ ತೆಗೆದು ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಊಟದ ನಂತರ ಲೈಟ್ ಡಿಮ್ ಮಾಡಿದಾಗ ಈ ಘಟನೆ ನಡೆದಿದೆ. ಮೂತ್ರ ವಿಸರ್ಜನೆಯ ನಂತರ, ಇನ್ನೊಬ್ಬ ಪ್ರಯಾಣಿಕರು ಆತನನ್ನು ಹೊರಡುವಂತೆ ಹೇಳುವವರೆಗೂ ವ್ಯಕ್ತಿ ಅಲ್ಲಿಯೇ ನಿಂತಿದ್ದನು ಎಂದು ತಿಳಿದುಬಂದಿದೆ.
ಇದೀಗ ದುರ್ವರ್ತನೆ ತೋರಿದ ಪ್ರಯಾಣಿಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಈ ಬಗ್ಗೆ ಏರ್ ಇಂಡಿಯಾ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಸಹ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟುಮಾಡಿದ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದೆ.
"ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಸಹ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟುಮಾಡಿದ ಪ್ರಯಾಣಿಕರೊಬ್ಬರು ಸ್ವೀಕಾರಾರ್ಹವಲ್ಲದ ಮತ್ತು ಅಸಭ್ಯವಾಗಿ ವರ್ತಿಸಿದ ಘಟನೆಯನ್ನು ಏರ್ ಇಂಡಿಯಾ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣದಲ್ಲಿ ಈಗಾಗಲೇ ಪೊಲೀಸ್ ದೂರು ದಾಖಲಾಗಿದೆ ಮತ್ತು ನೊಂದ ಪ್ರಯಾಣಿಕರಿಗೆ ನ್ಯಾಯ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಕಾನೂನು ಜಾರಿ ಸಂಸ್ಥೆಗಳು ಮತ್ತು ನಿಯಂತ್ರಕ ಅಧಿಕಾರಿಗಳಿಗೆ ಸಹಾಯ ಮಾಡಲು ಏರ್ ಇಂಡಿಯಾ ಬದ್ಧವಾಗಿದೆ" ಎಂದು ಏರ್ ಇಂಡಿಯಾ ತಿಳಿಸಿದೆ. ಅಲ್ಲದೆ ಸಂಸ್ಥೆಯ ವಕ್ತಾರರು ಈ ವಿಷಯವನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ (DGCA) ವರದಿ ಮಾಡಿದ್ದಾರೆ ಎಂದು ಹೇಳಿದೆ.
ಮೊದಲ ಹಂತವಾಗಿ, ಏರ್ ಇಂಡಿಯಾ ಪ್ರಯಾಣಿಕರನ್ನು 30 ದಿನಗಳವರೆಗೆ ನಿಷೇಧಿಸಿದ್ದು,ಏಕಪಕ್ಷೀಯವಾಗಿ ಗರಿಷ್ಠ ಶಿಕ್ಷೆ ಜಾರಿ ಮಾಡಲು ಅನುಮತಿ ಇದೆ ಎಂದು ಅದು ಹೇಳಿದೆ. ಅಲ್ಲದೆ ಪ್ರಕರಣ ಸಂಬಂಧ ಸಂಸ್ಥೆಯಲ್ಲಿ ಆಂತರಿಕ ತನಿಖೆಗೆ ಆದೇಶಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ