ನೋಯ್ಡಾ: ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಕಾರು ಡಿಕ್ಕಿ ಹೊಡೆದು 500 ಮೀ.ಗೂ ಹೆಚ್ಚು ದೂರ ಎಳೆದೊಯ್ದು ಘಟನೆ ನಡೆದಿದೆ. ಮೃತನನ್ನು ಉತ್ತರ ಪ್ರದೇಶದ ಮೈನ್‍ಪುರಿ ನಿವಾಸಿ ಕೌಶಲ್ ಯಾದವ್ ಎಂದು ಗುರುತಿಸಲಾಗಿದೆ.
ಈತ ನೋಯ್ಡಾದ ಸೆಕ್ಟರ್ 14 ಫ್ಲೈ ಓವರ್ ಅನ್ನು ಹಾದು ಹೋಗುತ್ತಿದ್ದಾಗ ಅವನ ಬೈಕಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಕೌಶಲ್ ಬೈಕ್‍ನಿಂದ ಕೆಳಗೆ ಬಿದ್ದಾನೆ. ಈ ವೇಳೆ ಆತ ಕಾರಿಗೆ ಸಿಲುಕಿದ್ದು, ಆತನನ್ನು ಆ ಕಾರು ಶನಿ ದೇವಸ್ಥಾನದವರೆಗೆ ಎಳೆದೊಯ್ದಿದೆ. ಅಪಘಾತದ ಸ್ಥಳದಿಂದ ಸುಮಾರು 500 ಮೀ ದೂರದಲ್ಲಿ ಚಾಲಕನು ಕಾರನ್ನು ನಿಲ್ಲಿಸಿದ್ದಾನೆ. ನಂತರ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿ ಮೃತ ವ್ಯಕ್ತಿಯ ಕುಟುಂಬದವರು 1ನೇ ಹಂತದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ನಡೆದ ರಾತ್ರಿ ಕೌಶಲ್‍ಗೆ ಕರೆ ಮಾಡಿದ್ದಾಗ, ಕೌಶಿಕ್ ಫೋನ್ ಅನ್ನು ಕ್ಯಾಬ್ ಡ್ರೈವರ್ ಎತ್ತಿಕೊಂಡು ಅಪಘಾತವಾಗಿರುವ ವಿಷಯವನ್ನು ತಿಳಿಸಿದ್ದು, ಶನಿ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಬಿದ್ದಿದ್ದಾನೆ ಎಂಬುದನ್ನು ದೂರಿನಲ್ಲಿ ಆತನ ಕುಟುಂಬಸ್ಥರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಿಟ್ ಅಂಡ್ ರನ್ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಶೋಧಿಸಲಾಗುತ್ತಿದ್ದು, ಕೌಶಲ್ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ ಕ್ಯಾಬ್ ಚಾಲಕನನ್ನು ವಿಚಾರಣೆ ನಡೆಸಲಾಗುತ್ತಿದೆ.
Advertisement