ಮರುಕಳಿಸಿದ ದೆಹಲಿ ಮಾದರಿಯ ಅಪಘಾತ: ಸ್ಕೂಟಿಗೆ ಡಿಕ್ಕಿ, ಮಹಿಳೆಯನ್ನು 3 ಕಿ.ಮೀ ಎಳೆದೊಯ್ದ ಟ್ರಕ್!
ದೆಹಲಿಯಲ್ಲಿ ಹೊಸ ವರ್ಷದ ಆಚರಣೆಯ ಆಸುಪಾಸಿನಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದ ಪ್ರಕರಣ ಮಾಸುವ ಮುನ್ನವೇ ಅಂಥಹದ್ದೇ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
Published: 05th January 2023 03:56 AM | Last Updated: 05th January 2023 03:57 AM | A+A A-

ಅಪಘಾತಕ್ಕೆ ಕಾರಣವಾದ ಟ್ರಕ್
ಲಖನೌ: ದೆಹಲಿಯಲ್ಲಿ ಹೊಸ ವರ್ಷದ ಆಚರಣೆಯ ಆಸುಪಾಸಿನಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದ ಪ್ರಕರಣ ಮಾಸುವ ಮುನ್ನವೇ ಅಂಥಹದ್ದೇ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಬಲೇನೋ ಕಾರು 20 ವರ್ಷದ ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದು ಆಕೆಯನ್ನು 12 ಕಿ.ಮೀ ಎಳೆದೊಯ್ದಿತ್ತು. ಈಗ ಉತ್ತರ ಪ್ರದೇಶದ ಬಾಂದದಲ್ಲಿ ಟ್ರಕ್ ಒಂದು ಸ್ಕೂಟಿಗೆ ಡಿಕ್ಕಿ ಹೊಡೆದು ಮಹಿಳೆಯನ್ನು 3 ಕಿ.ಮೀ ವರೆಗೂ ಎಳೆದೊಯ್ದಿದೆ.
ಬಾಂದಾ ಜಿಲ್ಲೆಯ ಮಾವಿ ಬುಜುರ್ಗ್ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಟ್ರಕ್ ಚಾಸಿಸ್ ಗೆ ಮಹಿಳೆಯ ದೇಹ ಸಿಲುಕಿಕೊಂಡಿದ್ದು ಬಳಿಕ ಟ್ರಕ್ ಗೆ ಬೆಂಕಿ ಹೊತ್ತಿಕೊಂಡಿದೆ, ಸಂತ್ರಸ್ತೆಯ ಸ್ಕೂಟಿ ಸುಟ್ಟುಹೋಗಿದೆ.
ಇದನ್ನೂ ಓದಿ: ಕಾಂಜಾವಾಲಾ ಪ್ರಕರಣ: ಮಹಿಳೆ ಕಾರಿನಡಿ ಸಿಲುಕಿರುವುದು ಆರೋಪಿಗಳಿಗೆ ತಿಳಿದಿತ್ತು- ಪ್ರತ್ಯಕ್ಷದರ್ಶಿಗಳು
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮಹಿಳೆಯ ಮೃತದೇಹವನ್ನು ಟ್ರಕ್ ನಿಂದ ಹೊರತೆಗೆಯಲಾಗಿದೆ
ಈ ಬಗ್ಗೆ ಆಂಗ್ಲ ಮಾಧ್ಯಮವೊಂದಕ್ಕೆ ಮಾತನಾಡಿರುವ ವಿವಿಯೊಂದರ ಪಿಆರ್ ಒ ಬಿಕೆ ಗುಪ್ತ, ಸಂತ್ರಸ್ತೆಯನ್ನು ಪುಷ್ಪ ಎಂದು ಗುರುತಿಸಿದ್ದು, ವಿವಿಯಲ್ಲಿ ಆಕೆ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಿದ್ದಾರೆ. ಆಕೆ ಮನೆಗೆ ಅಗತ್ಯವಿರುವ ಪದಾರ್ಥಗಳನ್ನು ತರಲು ಹಾಗೂ ಪೆಟ್ರೋಲ್ ತುಂಬಿಸಿಕೊಂಡು ಬರಲು ಹೋಗಿದ್ದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ: ದೆಹಲಿ ಮಹಿಳೆ ಸಾವು ಪ್ರಕರಣ: ಲೈಂಗಿಕ ದೌರ್ಜನ್ಯ ಆರೋಪ ತಳ್ಳಿಹಾಕಿದ ಮರಣೋತ್ತರ ಪರೀಕ್ಷೆ
ಮಹಿಳೆಯ ಸ್ಕೂಟಿಗೆ ಟ್ರಕ್ ಡಿಕ್ಕಿ ಹೊಡೆದ ಬಳಿಕ ಮಹಿಳೆಯ ದೇಹ ಟ್ರಕ್ ನ ಅಡಿ ಸಿಲುಕಿಕೊಂಡಿದೆ. ಇದನ್ನು ಗಮನಿಸಿದ ಹಲವರು ಟ್ರಕ್ ನ್ನು ನಿಲ್ಲಿಸಲು ಯತ್ನಿಸಿದ್ದಾರಾದರೂ ಟ್ರಕ್ ಚಾಲಕ ವಾಹನವನ್ನು ನಿಲ್ಲಿಸಿಲ್ಲ. ನೋ ಬ್ರೇಕರ್ಸ್ ಪ್ರದೇಶದಲ್ಲಿ ಈ ಅಪಘಾತ ಉಂಟಾಗಿದೆ.
ಮೃತ ಮಹಿಳೆ ಲಖನೌ ನಿವಾಸಿಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಆರೋಪಿ ಚಾಲಕನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.