ದೆಹಲಿ ಮಹಿಳೆ ಸಾವು ಪ್ರಕರಣ: ಲೈಂಗಿಕ ದೌರ್ಜನ್ಯ ಆರೋಪ ತಳ್ಳಿಹಾಕಿದ ಮರಣೋತ್ತರ ಪರೀಕ್ಷೆ
ನವದೆಹಲಿ: ದೆಹಲಿಯಲ್ಲಿ ಮಹಿಳೆಯನ್ನು ಕಾರಿನ ಕೆಳಗೆ ಎಳೆದೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದ್ದು, ಸಾವಿಗೂ ಮುನ್ನ ಸಂತ್ರಸ್ಥ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಖಾಸಗಿ ಅಂಗದಲ್ಲಿ ಯಾವುದೇ ಗಾಯಗಳಾಗಿಲ್ಲ. ಲೈಂಗಿಕ ದೌರ್ಜನ್ಯದ ಯಾವುದೇ ಕುರುಹುಗಳಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರ ಮಂಡಳಿ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿಯನ್ನು ಮಧ್ಯಾಹ್ನ 2 ಗಂಟೆಗೆ ಪೊಲೀಸರಿಗೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಅಂತೆಯೇ ಹೆಚ್ಚಿನ ಪರೀಕ್ಷೆಗಳಿಗಾಗಿ, ಅವರ ಮಾದರಿಗಳು ಮತ್ತು ಅವರ ಜೀನ್ಸ್ ತುಣುಕುಗಳನ್ನು ಸಂರಕ್ಷಿಸಲಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ಐದು ಮಂದಿಯನ್ನು ಬಂಧಿಸಲಾಗಿದ್ದು, ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪಗಳನ್ನು ಹೊರಿಸಲಾಗಿದೆ. ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಪೊಲೀಸರು ಈಗಾಗಲೇ ಹೇಳಿದ್ದರು.
ಆದಾಗ್ಯೂ, ತನಿಖಾಧಿಕಾರಿಗಳು ಪ್ರಮುಖ ಸಾಕ್ಷಿಯನ್ನು ಕಂಡುಕೊಂಡಿದ್ದು, ಈವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 20 ವರ್ಷದ ಅಂಜಲಿ, ಸ್ನೇಹಿತೆ ನಿಧಿಯೊಂದಿಗೆ ಇದ್ದಾಗ ಮಾರುತಿ ಬಲೆನೊ ಕಾರು ಅವರ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಸ್ನೇಹಿತೆ ಸ್ಥಳದಿಂದ ಓಡಿ ಹೋಗಿದ್ದು. ಆದರೆ ಅಂಜಲಿಯ ಕಾಲು ಕಾರಿನ ಆಕ್ಸಲ್‌ಗೆ ಸಿಲುಕಿದೆ. ಈ ವೇಳೆ ಕಾರಿನಲ್ಲಿದ್ದವರು ತಪ್ಪಿಸಿಕೊಳ್ಳುವ ಭರದಲ್ಲಿ ಕಾರನ್ನು ಶವ ಸಹಿತ ಸುಮಾರು ಕಿ.ಮೀಗಳವರೆಗೆ ಚಲಾಯಿಸಿಕೊಂಡು ಹೋಗಿದ್ದರು. ಈ ಸಂಬಂಧ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಡ್ರೈವಿಂಗ್ ಮಾಡುತ್ತಿದ್ದ ದೀಪಕ್ ಖನ್ನಾ ಅವರು ಕಾರಿನ ಅಡಿಯಲ್ಲಿ "ಏನೋ ಸಿಕ್ಕಿಹಾಕಿಕೊಂಡಿದೆ" ಎಂದು ಹೇಳಿದರು, ಆದರೆ ಇತರರು ಅವನಿಗೆ ಏನೂ ಆಗಿಲ್ಲ.. ಮೊದಲು ಹೋಗು ಎಂದು ಹೇಳಿದರು.
ಹೊಸ ವರ್ಷದ ಪಾರ್ಟಿಯಲ್ಲಿ ಪಾಲ್ಗೊಂಡು ಜನವರಿ 1 ರಂದು ಮುಂಜಾನೆ 1.45 ಕ್ಕೆ ಹೋಟೆಲ್‌ನಿಂದ ಹೊರಬಿದ್ದ ನಂತರ ಸಂತ್ರಸ್ತೆ ಹೋದ ಮಾರ್ಗವನ್ನು ಪೊಲೀಸರು ಮರು-ಚಾರ್ಟ್ ಮಾಡಿದ ನಂತರ ದುರಂತದ ವಿವರಗಳು ಬೆಳಕಿಗೆ ಬಂದಿವೆ. ಸುಲ್ತಾನ್‌ಪುರಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದ ಸ್ಥಳದಿಂದ ಅನತಿ ದೂರದಲ್ಲಿ ಇಬ್ಬರು ಮಹಿಳೆಯರು ಸ್ಕೂಟರ್‌ಗಳಲ್ಲಿ ಹೊಟೇಲ್‌ನಿಂದ ಹೊರಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಕಾರಿನಲ್ಲಿದ್ದವರು ಮದ್ಯಪಾನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಕಾರು ಶವ ಎಳೆದುಕೊಂಡು ಹೋಗುತ್ತಿರುವುದನ್ನು ನೋಡಿದ ಜನರಿಂದ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿ ಕಾರಿನಲ್ಲಿದ್ದವರನ್ನು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಯೊಬ್ಬರು ಕಾರಿನಲ್ಲಿದ್ದವರನ್ನು ಎಚ್ಚರಿಸಲು ಪ್ರಯತ್ನಿಸಿದರು ಮತ್ತು ಅವರನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿದರು, ಆದರೆ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ