ಕಾಂಜಾವಾಲಾ ಪ್ರಕರಣ: ಮಹಿಳೆ ಕಾರಿನಡಿ ಸಿಲುಕಿರುವುದು ಆರೋಪಿಗಳಿಗೆ ತಿಳಿದಿತ್ತು- ಪ್ರತ್ಯಕ್ಷದರ್ಶಿಗಳು
ದೆಹಲಿಯ ಹೊರವಲಯದ ಕಾಂಜಾವಾಲಾ ಮಹಿಳೆ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸಾವಿಗೀಡಾದ ಮಹಿಳೆ ಕಾರಿನಡಿ ಸಿಲುಕಿಕೊಂಡಿರುವುದು ತಿಳಿದಿದ್ದರೂ ಕೂಡ ಆರೋಪಿಗಳು ಕಾರು ಚಲಾಯಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
Published: 04th January 2023 10:33 AM | Last Updated: 04th January 2023 02:10 PM | A+A A-

ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು.
ನವದೆಹಲಿ: ದೆಹಲಿಯ ಹೊರವಲಯದ ಕಾಂಜಾವಾಲಾ ಮಹಿಳೆ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸಾವಿಗೀಡಾದ ಮಹಿಳೆ ಕಾರಿನಡಿ ಸಿಲುಕಿಕೊಂಡಿರುವುದು ತಿಳಿದಿದ್ದರೂ ಕೂಡ ಆರೋಪಿಗಳು ಕಾರು ಚಲಾಯಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ದೆಹಲಿಯ ಹೊರಭಾಗದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಹಲವು ಕಿಲೋಮೀಟರ್‌ಗಳವರೆಗೆ ಮಹಿಳೆಯ ದೇಹ ಎಳೆದೊಯ್ದು ಹತ್ಯೆಗೀಡಾದ 20ರ ಹರೆಯದ ಮಹಿಳೆಯ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಈ ಸಂಬಂಧ ನಿನ್ನೆಯಷ್ಟೇ ಘಟನೆ ವೇಳೆ ಮಹಿಳೆ ಸ್ಕೂಟಿಯಲ್ಲಿ ಒಬ್ಬಳೇ ಇರಲಿಲ್ಲ, ಆಕೆಯ ಜೊತೆಗೆ ಸ್ನೇಹಿತೆ ಕೂಡ ಇದ್ದಳು ಎಂಬುದು ತಿಳಿದುಬಂದಿತ್ತು. ಅಪಘಾತ ಸಂಭವಿಸಿದ ಬಳಿಕ ಕೆಳಗೆ ಬಿದ್ದ ಸ್ನೇಹಿತೆಗೆ ಸಣ್ಣಪುಟ್ಟ ಗಾಯಗಳಾಗಿತ್ತು ಎಂಬುದು ತಿಳಿದುಬಂದಿತ್ತು.
ಇದನ್ನೂ ಓದಿ: ಕಾಂಜಾವಾಲಾ ಮಹಿಳೆ ಸಾವು ಪ್ರಕರಣ: ಹೋಟೆಲ್ ಹೊರಗೆ ಸ್ನೇಹಿತೆಯೊಂದಿಗೆ ಸಂತ್ರಸ್ತೆ ಜಗಳ- ಪೊಲೀಸ್
ಘಟನೆ ಕುರಿತು ಪ್ರತ್ಯದರ್ಶಿಗಳು ಮಾಹಿತಿ ನೀಡಿದ್ದು, ಮಹಿಳೆ ಕಾರಿನಡಿ ಸಿಲುಕಿಕೊಂಡಿರುವುದು ಗೊತ್ತಿದ್ದರೂ ಆರೋಪಿಗಳು ವಾಹನವನ್ನು ಉದ್ದೇಶಪೂರ್ವಕವಾಗಿಯೇ ಚಲಾಯಿಸುತ್ತಿದ್ದರು ಎಂದು ಹೇಳಿದ್ದಾರೆ.
ಕಾರಿನಡಿ ಮಹಿಳೆ ಸಿಲುಕಿರುವುದು ಅವರಿಗೆ ತಿಳಿದಿತ್ತು. ಆಕೆಯನ್ನು ತೊಡೆದುಹಾಕರು ಹಿಂದೆ-ಮುಂದೆ ಕಾರು ಚಲಾಯಿಸಿದ್ದರು. ಆದರೆ, ಅಂಜಲಿಯವರ ದೇಹದ ಭಾಗ ಕಾರಿನ ಭಾಗಗಳಲ್ಲಿ ಸಿಲುಕಿಕೊಂಡಿತ್ತು. ಅಂಜಲಿಯವರು ಕಾಪಾಡಿ, ಕಾಪಾಡಿ ಎಂದು ಕೂಗುತ್ತಿದ್ದರು, ಆದರೆ, ಅವರು ಈ ಬಗ್ಗೆ ಗಮನಕೊಡದಂತೆ ಕಾರು ಚಲಾಯಿಸಿದ್ದರು ಎಂದು ಮೃತ ಮಹಿಳೆಯ ಸ್ನೇಹಿತೆ ನಿಧಿ ಕೂಡ ಖಾಸಗಿ ವಾಹನಿಯೊಂದರಲ್ಲಿ ಹೇಳಿಕೊಂಡಿದ್ದಾರೆ.
ಘಟನೆ ಬಗ್ಗೆ ಪೊಲೀಸರಿಗೇಕೆ ಮಾಹಿತಿ ನೀಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅಪಘಾತ ನೋಡಿದ ಬಳಿಕ ನಾನು ಆಘಾತಕ್ಕೊಳಗಾಗಿದ್ದೆ. ಮಾತನಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಸಂಪೂರ್ಣ ನಿಸ್ಸಾಹಕ ಹಾಗೂ ಭಯಭೀತಳಾಗಿದ್ದೆ. ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆಘಾತಕ್ಕೊಳಗಾಗಿದ್ದ ನಾನು ನೇರವಾಗಿ ಮನೆಗೆ ಹೋಗಿದ್ದೆ, ಅಪಘಾತದ ಬಗ್ಗೆ ಅಂಜಲಿ ಮನೆಯವರಿಗೆ ತಿಳಿಸಿದ್ದೆ. ಆದರೆ, ಅವರು ನನ್ನ ಮೇಲೆ ಆರೋಪ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಮಹಿಳೆ ಸಾವು ಪ್ರಕರಣ: ಲೈಂಗಿಕ ದೌರ್ಜನ್ಯ ಆರೋಪ ತಳ್ಳಿಹಾಕಿದ ಮರಣೋತ್ತರ ಪರೀಕ್ಷೆ
ಇನ್ನು ಜಗಳದ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿ, ಸ್ಕೂಟಿ ಯಾರು ಚಲಾಯಿಸಬೇಕೆಂಬುದರ ಬಗ್ಗೆ ಇಬ್ಬರ ನಡುವೆ ಜಗಳವಾಗುತ್ತಿತ್ತು ಎಂದಿದ್ದಾರೆ.
ಈ ಬಗ್ಗೆ ನಿಧಿಯವರು ಪ್ರತಿಕ್ರಿಯೆ ನೀಡಿ, ಅಂಜಲಿ ಮದ್ಯದ ಅಮಲಿನಲ್ಲಿದ್ದಳು. ವಾಹನ ಓಡಿಸಲು ಅನುಮತಿಸದಿದ್ದರೆ ಸ್ಕೂಟರ್ ನಿಂದ ಜಿಗಿಯುವುದಾಗಿದಾಗಿ ಬೆದರಿಕೆ ಹಾಕಿದ್ದಳು ಎಂದು ಹೇಳಿದ್ದಾರೆ.
ಏತನ್ಮಧ್ಯೆ, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ನಿಧಿಯವರ ವರ್ತನೆಯನ್ನು ಖಂಡಿಸಿದ್ದಾರೆ. ಆಪಘಾತದ ಬಳಿಕ ಸ್ನೇಹಿತೆಗೆ ಸಹಾಯ ಮಾಡದೆ ದೂರ ಹೋಗಿದ್ದನ್ನು ಅವರು ಪ್ರಶ್ನಿಸಿದ್ದಾರೆ.
ಖಾಸಗಿ ವಾಹಿನಿಯ ಲೈವ್ ಶೋನಲ್ಲಿ ಕುಳಿತಿರುವ ಅಂಜಲಿಯ ಸ್ನೇಹಿತೆ, ಅಂಜಲಿ ಕಾರಿನಡಿ ಹೇಗೆ ಸಿಲುಕಿಕೊಂಡಳು ಹಾಗೂ ಕಾರನ್ನು ಆರೋಪಿಗಳು ಯಾವ ರೀತಿ ಚಲಾಯಿಸಿದ್ದರು ಎಂಬುದನ್ನು ವಿವರಿಸಿದ್ದಾಳೆ. ಘಟನೆ ಬಳಿಕ ಮನೆಗೆ ಹೋದೆ ಎಂದೂ ಹೇಳುತ್ತಿದ್ದಾರೆ. ಆಕೆ ಎಂತಹ ಸ್ನೇಹಿತೆ? ಕಾರಿನಡಿ ಸ್ನೇಹಿತೆ ಸಿಲುಕಿದ್ದರೂ ತಡೆಯುವ ಯತ್ನವನ್ನೇಕೆ ಆಕೆ ಮಾಡಲಿಲ್ಲ? ಪೊಲೀಸರಿಗೆ ಅಥವಾ ಅಂಜಲಿಯ ಯಾವುದೇ ಸಂಬಂಧಿಕರಿಗೆ ಏಕೆ ಮಾಹಿತಿ ನೀಡಲಿಲ್ಲ. ಮನೆಯಲ್ಲಿ ಹೋಗಿ ಕುಳಿತುಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಮಲಿವಾಲ್ ಅವರು ಹೇಳಿದ್ದಾರೆ.