ದೆಹಲಿ ಸಿಎಂ ಕೇಜ್ರಿವಾಲ್'ಗೆ ಶುರುವಾಯ್ತು ರಾಜಕೀಯ ಜಾಹೀರಾತು ಸಂಕಷ್ಟ: 10 ದಿನದಲ್ಲಿ ರೂ.164 ಕೋಟಿ ಹಿಂತಿರುಗಿಸುವಂತೆ ನೋಟಿಸ್ ಜಾರಿ!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್​ ಆದ್ಮಿ ಪಕ್ಷಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಸರ್ಕಾರಿ ಜಾಹೀರಾತುಗಳ ಹೆಸರಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಿದ ಆರೋಪದ ಕೇಳಿ ಬಂದ ಹಿನ್ನೆಲೆಯಲ್ಲಿ 10 ದಿನಗಳೊಳಗಾಗಿ ರೂ.163.62 ಕೋಟಿ ಹಿಂತಿರುಗಿಸುವಂತೆ ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್​ ಆದ್ಮಿ ಪಕ್ಷಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಸರ್ಕಾರಿ ಜಾಹೀರಾತುಗಳ ಹೆಸರಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಿದ ಆರೋಪದ ಕೇಳಿ ಬಂದ ಹಿನ್ನೆಲೆಯಲ್ಲಿ 10 ದಿನಗಳೊಳಗಾಗಿ ರೂ.163.62 ಕೋಟಿ ಹಿಂತಿರುಗಿಸುವಂತೆ ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.

‘ದಿ ಡೈರೆಕ್ಟರ್ ಆಫ್ ಇನ್ಫಾರ್ಮೆಷನ್ ಅಂಡ್ ಪಬ್ಲಿಸಿಟಿ’ (ಡಿಐಪಿ), ಕೇಜ್ರಿವಾಲ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ನಿರ್ದೇಶನದಂತೆ ದಿ ಡೈರೆಕ್ಟರ್ ಆಫ್ ಇನ್ಫಾರ್ಮೆಷನ್ ಅಂಡ್ ಪಬ್ಲಿಸಿಟಿ ಆಮ್ ಆದ್ಮಿ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.

ನೋಟಿಸ್ ನಲ್ಲಿ ಮುಂದಿನ 10 ದಿನಗಳ ಒಳಗಾಗಿ ರೂ.163.62 ಕೋಟಿ ಹಿಂತಿರುಗಿಸುವಂತೆ ಸೂಚಿಸಿದ್ದು, ಒಂದು ವೇಳೆ ಹಿಂತಿರುಗಿಸದೇ ಹೋದಲ್ಲಿ ಪಕ್ಷದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.

ಮಾರ್ಚ್ 31, 2017 ರವರೆಗೆ ಜಾಹೀರಾತುಗಳಿಗಾಗಿ ಆಮ್ ಆದ್ಮಿ ಪಕ್ಷ ರೂ.99.32 ಕೋಟಿ ಖರ್ಚು ಮಾಡಿದ್ದು, ಉಳಿದ ರೂ.64.30 ಕೋಟಿ ಇದರ ಮೇಲಿನ ಬಡ್ಡಿಯ ಮೊತ್ತವಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷವು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷವನ್ನು ಗುರಿಯಾಗಿಸಲು ಲೆಫ್ಟಿನೆಂಟ್ ಗವರ್ನರ್ ಮತ್ತು ಬಿಜೆಪಿ, ದೆಹಲಿ ಸರ್ಕಾರದ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದೆ.

ದೆಹಲಿಯಲ್ಲಿ ಆಪ್ ಮತ್ತು ಕೇಂದ್ರದ ನಡುವಿನ ಹಗ್ಗಜಗ್ಗಾಟದಲ್ಲಿ ಇದೊಂದು ಹೊಸ ಅಧ್ಯಾಯವಾಗಿದೆ. ದೆಹಲಿಯಲ್ಲಿ ಕೇಂದ್ರದ ಪ್ರತಿನಿಧಿಯಾಗಿರುವ ಲೆಫ್ಟಿನೆಂಟ್ ಗವರ್ನರ್ ಬಿಜೆಪಿಯ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ ಮತ್ತು ಉದ್ದೇಶಪೂರ್ವಕವಾಗಿ ದೆಹಲಿ ಸರ್ಕಾರವನ್ನು ಪ್ರತಿ ಹಂತದಲ್ಲೂ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆಂದು ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ನಗರಾಡಳಿತ ಮತ್ತು ಸಚಿವರನ್ನು ಗುರಿಯಾಗಿಸಲು ಬಿಜೆಪಿಯು ದೆಹಲಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಬಿಜೆಪಿ ಸೇವಾ ಇಲಾಖೆಯ ಮೇಲೆ ಹಿಡಿತ ಸಾಧಿಸುತ್ತಿದ್ದು, ನಮ್ಮ ವಿರುದ್ಧ ಅಧಿಕಾರಿಗಳನ್ನು ಬಳಸುತ್ತಿದ್ದಾರೆ. ದೆಹಲಿ ಮುಖ್ಯಮಂತ್ರಿಯನ್ನು ಗುರಿಯಾಗಿಸಲು ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಬಿಜೆಪಿ ನಿಲ್ಲಿಸಬೇಕು. ನಮಗೆ ನಮ್ಮ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ತಿಳಿಸಿದ್ದಾರೆ.

ಎಎಪಿಯ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಅವರು ಮಾತನಾಡಿ, ಲೆಫ್ಟಿನೆಂಟ್ ಗವರ್ನರ್ ಆದೇಶವನ್ನು "ಹೊಸ ಪ್ರೇಮ ಪತ್ರ" ಎಂದು ವ್ಯಂಗ್ಯವಾಡಿದ್ದಾರೆ.

ನಾವು ರಾಷ್ಟ್ರೀಯ ಪಕ್ಷವಾಗಿ ಮಾರ್ಪಟ್ಟಿದ್ದೇವೆ ಮತ್ತು ಎಂಸಿಡಿಯಲ್ಲಿ ಅಧಿಕಾರವನ್ನು ಕಸಿದುಕೊಂಡಿದ್ದೇವೆ. ಇದು ಬಿಜೆಪಿಯನ್ನು ಗಲಿಬಿಲಿಗೊಳ್ಳುವಂತೆ ಮಾಡಿದೆ. ಎಲ್‌ಜಿ ಸಾಹೇಬರು ಬಿಜೆಪಿಯ ನಿರ್ದೇಶನದಂತೆ ಎಲ್ಲವನ್ನೂ ಮಾಡುತ್ತಿದ್ದಾರೆ ಮತ್ತು ಇದು ದೆಹಲಿಯ ಜನರನ್ನು ತೊಂದರೆಗೆ ಸಿಲುಕಿಕೊಳ್ಳುವಂತೆ ಮಾಡುತ್ತಿದೆ. ಈ ಬೆಳವಣಿಗೆಯಿಂದ ದೆಹಲಿ ಜನತೆ ಹೆಚ್ಚು ಚಿಂತಿತರಾಗಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಅವರ ಈ ಆದೇಶವು ಕಾನೂನಿನ ಪ್ರಕಾರ ನಿಲ್ಲುವುದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com