ಇಡೀ ಜೋಶಿಮಠ ಮುಳುಗುವ ಸಾಧ್ಯತೆ ಎಚ್ಚರಿಕೆ ನೀಡಿದ ಇಸ್ರೋ: ಉಪಗ್ರಹ ಚಿತ್ರ ಬಿಡುಗಡೆ, ಆತಂಕ ಹುಟ್ಟಿಸುತ್ತಿದೆ ಪ್ರಾಥಮಿಕ ವರದಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ರಾಷ್ಟ್ರೀಯ ದೂರಸಂವೇದಿ ಕೇಂದ್ರ ಜೋಶಿಮಠದ ಉಪಗ್ರಹ ಚಿತ್ರಗಳನ್ನು ಮತ್ತು ಭೂ ಕುಸಿತದ ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಈ ಚಿತ್ರದ ಮೂಲಕ ಇನ್ನು ಕೆಲವೇ ದಿನಗಳಲ್ಲಿ ಇಡೀ ಜೋಶಿಮಠ ಮುಳುಗುವ ಎಚ್ಚರಿಕೆಯನ್ನು ನೀಡಿದೆ.
ಇಸ್ರೋ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರ
ಇಸ್ರೋ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ರಾಷ್ಟ್ರೀಯ ದೂರಸಂವೇದಿ ಕೇಂದ್ರ ಜೋಶಿಮಠದ ಉಪಗ್ರಹ ಚಿತ್ರಗಳನ್ನು ಮತ್ತು ಭೂ ಕುಸಿತದ ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಈ ಚಿತ್ರದ ಮೂಲಕ ಇನ್ನು ಕೆಲವೇ ದಿನಗಳಲ್ಲಿ ಇಡೀ ಜೋಶಿಮಠ ಮುಳುಗುವ ಎಚ್ಚರಿಕೆಯನ್ನು ನೀಡಿದೆ.

ಚಿತ್ರಗಳನ್ನು ಕಾರ್ಟೊಸ್ಯಾಟ್-2ಎಸ್ ಉಪಗ್ರಹದಿಂದ ತೆಗೆಯಲಾಗಿದೆ. ಹೈದರಾಬಾದ್ ಮೂಲದ ಎನ್ಆರ್'ಎಸ್'ಸಿ ಮುಳುಗುತ್ತಿರುವ ಪ್ರದೇಶಗಳ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಚಿತ್ರಗಳಲ್ಲಿ, ಸೇನೆಯ ಹೆಲಿಪ್ಯಾಡ್ ಮತ್ತು ನರಸಿಂಹ ದೇವಸ್ಥಾನ ಸೇರಿದಂತೆ ಇಡೀ ಪಟ್ಟಣವನ್ನು ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ.

ಇಸ್ರೋದ ಪ್ರಾಥಮಿಕ ವರದಿಯ ಆಧಾರದ ಮೇಲೆ, ಉತ್ತರಾಖಂಡ ಸರ್ಕಾರವು ಅಪಾಯ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಿದೆ ಈ ಪ್ರದೇಶಗಳಲ್ಲಿರುವ ಜನರನ್ನು ಆದ್ಯತೆಯ ಮೇಲೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಯತ್ನವನ್ನು ಮಾಡುತ್ತಿದೆ.

ವರದಿಯ ಪ್ರಕಾರ, 2022ರ ಏಪ್ರಿಲ್ ಮತ್ತು ನವೆಂಬರ್ ನಡುವೆ ಭೂಮಿಯ ಕುಸಿತವು ನಿಧಾನವಾಗಿತ್ತು. ಈ ಸಮಯದಲ್ಲಿ ಜೋಶಿಮಠವು 8.9 ಸೆಂ.ಮೀ ಕುಸಿದಿದೆ. ಆದರೆ 2022ರ ಡಿಸೆಂಬರ್ 27ರಿಂದ 2023 ಜನವರಿ 8ರ ನಡುವೆ, ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿದೆ. ಈ 12 ದಿನಗಳ ಅಂತರದಲ್ಲಿ ಪಟ್ಟಣ 5.4 ಸೆಂ.ಮೀ ನಷ್ಟು ಕುಸಿದಿದೆ ಎಂದು ತಿಳಿಸಿದೆ.

ಭೂ ಕುಸಿತದಿಂದ ಜೋಶಿಮಠ-ಔಲಿ ರಸ್ತೆಯೂ ನಾಶವಾಗಲಿದೆ ಎಂದು ಇಸ್ರೋ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಪಟ್ಟಣದಲ್ಲಿ ಭೂಮಿ ಕುಸಿದ ನಂತರ ಮನೆ, ರಸ್ತೆಗಳಲ್ಲಿ ಕಾಣಿಸಿಕೊಂಡ ಬಿರುಕುಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದರೂ ಇಸ್ರೋದ ಪ್ರಾಥಮಿಕ ವರದಿಯಲ್ಲಿ ಕಂಡು ಬಂದಿರುವುದು ಭಯ ಹುಟ್ಟಿಸುವಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com