ಅಭಿವೃದ್ಧಿ ಚಟುವಟಿಕೆಗಳನ್ನು ನಿಲ್ಲಿಸದಿದ್ದಲ್ಲಿ ಜೋಶಿಮಠದ ಪರಿಸ್ಥಿತಿ ಪಶ್ಚಿಮ ಮತ್ತು ಪೂರ್ವ ಘಟ್ಟಗಳಲ್ಲಿಯೂ ಎದುರಾಗಲಿದೆ: ತಜ್ಞರ ಎಚ್ಚರಿಕೆ

ಅಭಿವೃದ್ಧಿ ಚಟುವಟಿಕೆಗಳನ್ನು ನಿಲ್ಲಿಸದಿದ್ದಲ್ಲಿ ಉತ್ತರಾಖಂಡದ ಜೋಶಿಮಠದಲ್ಲಿ ಸಂಭವಿಸಿದ ದುರಂತವೇ ದುರ್ಬಲವಾದ ಪಶ್ಚಿಮ ಮತ್ತು ಪೂರ್ವ ಘಟ್ಟಗಳಲ್ಲಿಯೂ ಸಂಭವಿಸಲಿದೆ. ನಿರ್ಲಕ್ಷ್ಯ ತೋರದಿರಿ ಎಂದು ತಜ್ಞರು ಹಾಗೂ ಭೂವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮ ಘಟ್ಟ (ಸಂಗ್ರಹ ಚಿತ್ರ)
ಪಶ್ಚಿಮ ಘಟ್ಟ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಅಭಿವೃದ್ಧಿ ಚಟುವಟಿಕೆಗಳನ್ನು ನಿಲ್ಲಿಸದಿದ್ದಲ್ಲಿ ಉತ್ತರಾಖಂಡದ ಜೋಶಿಮಠದಲ್ಲಿ ಸಂಭವಿಸಿದ ದುರಂತವೇ ದುರ್ಬಲವಾದ ಪಶ್ಚಿಮ ಮತ್ತು ಪೂರ್ವ ಘಟ್ಟಗಳಲ್ಲಿಯೂ ಸಂಭವಿಸಲಿದೆ. ನಿರ್ಲಕ್ಷ್ಯ ತೋರದಿರಿ ಎಂದು ತಜ್ಞರು ಹಾಗೂ ಭೂವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಹಲವಡೆ ಭೂಕಂಪ, ಭೂಕುಸಿತ ಪ್ರವಾಹಗಳು ಎದುರಾಗುತ್ತಿದ್ದು, ಇದು ಎಚ್ಚರಿಕೆಯ ಗಂಟೆಗಳನ್ನು ನೀಡುತ್ತಿದೆ. ಇದನ್ನು ಸರ್ಕಾರಗಳು ಮತ್ತು ಸ್ಥಳೀಯರು ನಿರ್ಲಕ್ಷಿಸುತ್ತಿದ್ದಾರೆ ಎಂದು ಭೂವಿಜ್ಞಾನಿಗಳು ಹೇಳಿದ್ದಾರೆ.

ಜೋಶಿಮಠದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಗಳು ಕೂಡಲೇ ದುರ್ಬಲವಿರುವ ಪ್ರದೇಶಗಳ ಭೂ-ವೈಜ್ಞಾನಿಕ ಮ್ಯಾಪಿಂಗ್ ಅನ್ನು ಕೈಗೊಳ್ಳಬೇಕು ಮತ್ತು ರಸ್ತೆ ನಿರ್ಮಾಣ ಕಾಮಗಾರಿಗಳು, ರೆಸಾರ್ಟ್‌ಗಳು ಮತ್ತು ಇತರ ಚಟುವಟಿಕೆಗಳಿಗಾಗಿ ಅತಿರೇಕದ ಬಂಡೆಗಳನ್ನು ಸ್ಫೋಟಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನ ಹಿರಿಯ ಭೂವಿಜ್ಞಾನಿಯೊಬ್ಬರು ಮಾತನಾಡಿ, ಸರ್ಕಾರವು ನದಿ ತಿರುವು ಮತ್ತು ಹೈಡಲ್ ಯೋಜನೆಗಳನ್ನು ಕೈಗೊಳ್ಳುವುದಾಗಿ ಘೋಷಿಸಿದಾಗ ಪ್ರದೇಶಗಳ ಸೂಕ್ಷ್ಮತೆಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ, ಸರ್ಕಾರವು ಯಾವುದೇ ಜಲವಿಜ್ಞಾನ, ಭೂವೈಜ್ಞಾನಿಕ ಮತ್ತು ಪರಿಸರ ಪ್ರಭಾವದ ಮೌಲ್ಯಮಾಪನಗಳನ್ನು ಕೈಗೊಳ್ಳದೆ ಘೋಷಣೆಗಳನ್ನು ಮುಂದುವರೆಸಿತು. ಜೋಶಿಮಠದಲ್ಲಿ ಸೇನಾ ನೆಲೆಯೂ ಇರುವುದರಿಂದ ಒತ್ತುವರಿ ತೆರವು ಕಾರ್ಯ ಚುರುಕುಗೊಂಡಿದೆ. ಅಭಿವೃದ್ಧಿ ಕಾರ್ಯಗಳನ್ನು ಕೂಡಲೇ ನಿಲ್ಲಿಸದೇ ಹೋದರಲ್ಲಿ ಪಶ್ಚಿಮ ಮತ್ತು ಪೂರ್ವ ಘಟ್ಟಗಳಲ್ಲಿ ಇದೇ ರೀತಿ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ.

ಹಿಮಾಲಯ ಶ್ರೇಣಿ ಮತ್ತು ಪಶ್ಚಿಮ ಘಟ್ಟಗಳಲ್ಲಿ ಕೆಲಸ ಮಾಡಿದ ಖ್ಯಾತ ಭೂವಿಜ್ಞಾನಿ ಶ್ರೀಧರ್ ರಾಮಮೂರ್ತಿ ಅವರು ಮಾತನಾಡಿ, ಹಳೆಯ ಅವಶೇಷಗಳಿರುವ ಪ್ರದೇಶಗಳನ್ನು ಈಗಾಗಲೇ ಅಭಿವೃದ್ಧಿಪಡಿಸಿರುವುದರಿಂದ ಜೋಶಿಮಠದಲ್ಲಿ ಶೇ.20ರಷ್ಟು ಪ್ರದೇಶದಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಹುದು ಎಂದು ಹೇಳಿದ್ದಾರೆ.

ಪಶ್ಚಿಮ ಘಟ್ಟಗಳಲ್ಲಿ, ನಗರೀಕರಣ ಮತ್ತು ಇತರ ಚಟುವಟಿಕೆಗಳಿಂದ ಈಗಾಗಲೇ ಸಣ್ಣ ಅವಘಡಗಳು ಆರಂಬವಾಗಿವೆ. ಸಮಸ್ಯೆ ಬಗೆರಹಿಸಲು ಸರ್ಕಾರದ ಪ್ರತಿಕ್ರಿಯೆ ಅಗತ್ಯವಿದೆ. ಯಾವುದೇ ಭೂವೈಜ್ಞಾನಿಕ ಅಥವಾ ಭೂ-ವೈಜ್ಞಾನಿಕ ಮ್ಯಾಪಿಂಗ್ ಇಲ್ಲದೆ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಅಭಿವೃದ್ಧಿ ನಡೆಯುತ್ತಿರುವ ಪ್ರದೇಶದ ವಿವರವಾದ ವೈಜ್ಞಾನಿಕ ಮೌಲ್ಯಮಾಪನ ಅಗತ್ಯವಿದೆ...
ಕೇರಳದ ಉದಾಹರಣೆಯೊಂದನ್ನು ಉಲ್ಲೇಖಿಸಿ ಮಾತನಾಡಿರುವ ರಾಮಮೂರ್ತಿ ಅವರು, ನೀರು ಹರಿಯಲು ಅಡಚಣೆಯುಂಟಾದಾಗ ಪ್ರವಾಹ ಎದುರಾಗಿತ್ತು. ಪಶ್ಚಿಮ ಘಟ್ಟಗಳ ಇತರ ಭಾಗಗಳಲ್ಲಿಯೂ ಇದೇ ರೀತಿಯ ಬಿರುಕುಗಳು ಅಭಿವೃದ್ಧಿಗೊಳ್ಳುತ್ತಿರುವುದು ಕಂಡುಬರುತ್ತದೆ ಎಂದು ಹೇಳಿದ್ದಾರೆ.

ಹಿಮಾಲಯ ಪ್ರದೇಶದಲ್ಲಿ ಪ್ರತಿ ವರ್ಷ ಸಣ್ಣ ಭೂಕಂಪಗಳು ಮತ್ತು ಪ್ರತಿದಿನ ಸೂಕ್ಷ್ಮ ಭೂಕಂಪಗಳು ಸಂಭವಿಸುತ್ತಿವೆ. ಪಶ್ಚಿಮ ಮತ್ತು ಪೂರ್ವ ಘಟ್ಟಗಳಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಎದುರಾಗಬಹುದು. ಆದರೆ, ಅದು ಯಾವಾಗ ಎಂದು ಈಗಲೇ ನಿರ್ಣಯಿಸಲು ಸಾಧ್ಯವಿಲ್ಲ. ಕಳೆದ ವರ್ಷ ಡೆಕ್ಕನ್ ಪ್ರಸ್ಥಭೂಮಿ ಮತ್ತು ಘಟ್ಟಗಳಲ್ಲಿ ಭೂಕಂಪಗಳು ವರದಿಯಾಗಿದ್ದವು. ಇದು ಎಚ್ಚರಿಕೆಯ ಗಂಟೆಯಾಗಿದೆ. ಆದರೂ ನಿರ್ಲಕ್ಷ್ಯ ತೋರಲಾಗಿದೆ. ವಿಶೇಷವಾಗಿ ಪ್ರದೇಶಗಳನ್ನು ವಸಾಹತುಗಳಿಗಾಗಿ ತೆರೆಯಲಾಗುತ್ತಿರುವುದು ಕಂಡು ಬಂದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕೋಲ್ಕತ್ತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ (IISER) ಪ್ರೊಫೆಸರ್ ಸೌಮಿತ್ರೋ ಬ್ಯಾನರ್ಜಿ ಅವರು ಮಾತನಾಡಿ, ಜೋಶಿಮಟ ಮತ್ತು ಹಿಮಾಲಯವು ಟೆಕ್ಟೋನಿಕ್ ಪ್ಲೇಟ್‌ಗಳ ಮೇಲೆ ನೆಲೆಗೊಂಡಿದೆ. ಆದರೆ ಪಶ್ಚಿಮ ಘಟ್ಟಗಳು ನೈಸರ್ಗಿಕ ಭೂವಿಜ್ಞಾನವನ್ನು ಹೊಂದಿವೆ. ಆದರೂ, ಅಪಾಯ ಸಂಭವಿಸುವುದಕ್ಕೂ ಮುನ್ನ ಎಚ್ಚರಿಕೆ ಕ್ರಮಗಳ ಕೈಗೊಳ್ಳುವುದು ಅಗತ್ಯವಿದೆ. ಪ್ರದೇಶಗಳ ವಿವರವಾದ ವೈಜ್ಞಾನಿಕ ಮೌಲ್ಯಮಾಪನದ ಅಗತ್ಯವಿದೆ. ಜೋಶಿಮಠದಲ್ಲಿ ಸಂಭವಿಸಿದ ಪರಿಸ್ಥಿತಿ ಇಲ್ಲಿ ಎದುರಾಗುವುದಕ್ಕೂ ಮುನ್ನವೇ ಮುಂಜಾಗ್ರತಾ ಕ್ರಮಗಳ ಕೈಗೊಳ್ಳಲು ಇದು ಸಕಾಲವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com