ಹೈದರಾಬಾದ್: ತೆಲಂಗಾಣದ ಸಿಕಂದರಾಬಾದ್ ಮತ್ತು ಆಂಧ್ರಪ್ರದೇಶದ ಬಂದರು ನಗರವಾದ ವಿಶಾಖಪಟ್ಟಣ ನಡುವಿನ ವಂದೇ ಭಾರತ್ ರೈಲು ಸೇವೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದ್ದಾರೆ.
ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿಯವರು, "ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲು ನನಗೆ ಸಂತೋಷವಾಗಿದೆ. ಇದು ಜೀವನ ಸೌಕರ್ಯವನ್ನು ಹೆಚ್ಚಿಸುತ್ತದೆ, ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ. ಇದು ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನರಿಗೆ ಉಡುಗೊರೆಯಾಗಿದೆ" ಎಂದು ಹೇಳಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಒಂದು ರೀತಿಯಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂಪರ್ಕಿಸುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತವು ಎಲ್ಲದರಲ್ಲೂ ಉತ್ತಮವಾದದ್ದನ್ನು ಬಯಸುತ್ತದೆ ಎಂಬುದನ್ನು ಸೂಚಿಸುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಹೊಸ ಸಂಕಲ್ಪ ಮತ್ತು ಸಾಮರ್ಥ್ಯದ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.
ಉದ್ಘಾಟನೆಯ ವೇಳೆ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ, ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಉಪಸ್ಥಿತರಿದ್ದರು.
ಎರಡು ತೆಲುಗು ರಾಜ್ಯಗಳ ನಡುವೆ ಕಾರ್ಯನಿರ್ವಹಿಸುವ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಸಿಕಂದರಾಬಾದ್‌ನಿಂದ ವಿಶಾಖಪಟ್ಟಣವನ್ನು ಎಂಟು ಗಂಟೆ 30 ನಿಮಿಷಗಳಲ್ಲಿ ತಲುಪುತ್ತದೆ.
Advertisement