ಕೊಟ್ಟ ಹಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲವೇ TDB: ಶಬರಿಮಲೆ ಭಕ್ತರ ಕಾಣಿಕೆ ಕಾಸು ಮಣ್ಣುಪಾಲು?; ತನಿಖೆಗೆ ಕೋರ್ಟ್ ಆದೇಶ

ದಕ್ಷಿಣ ಭಾರತದ ಖ್ಯಾತ ಪವಿತ್ರ ಯಾತ್ರಾತಾಣ ಶಬರಿಮಲೆಯಲ್ಲಿ ಹೊಸದೊಂದು ವಿವಾದ ಸೃಷ್ಟಿಯಾಗಿದ್ದು, ಭಕ್ತರು ನೀಡಿದ ಕಾಣಿಕೆ ಹಣವನ್ನು ಅಯ್ಯಪ ದೇಗುಲದ ಆಡಳಿತ ಮಂಡಳಿ ಸರಿಯಾಗಿ ನಿರ್ವಹಣೆ ಮಾಡದೇ ಹಣ ಹಾಳಾಗಿದೆ ಎಂಬ ಆರೋಪ ಕೇಳಿಬಂದಿದೆ.
ಶಬರಿಮಲೆ
ಶಬರಿಮಲೆ
Updated on

ಕೊಚ್ಚಿ: ದಕ್ಷಿಣ ಭಾರತದ ಖ್ಯಾತ ಪವಿತ್ರ ಯಾತ್ರಾತಾಣ ಶಬರಿಮಲೆಯಲ್ಲಿ ಹೊಸದೊಂದು ವಿವಾದ ಸೃಷ್ಟಿಯಾಗಿದ್ದು, ಭಕ್ತರು ನೀಡಿದ ಕಾಣಿಕೆ ಹಣವನ್ನು ಅಯ್ಯಪ ದೇಗುಲದ ಆಡಳಿತ ಮಂಡಳಿ ಸರಿಯಾಗಿ ನಿರ್ವಹಣೆ ಮಾಡದೇ ಹಣ ಹಾಳಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹೌದು.. ಕಳೆದ ಎರಡು ತಿಂಗಳಲ್ಲಿ ಯಾತ್ರೆ ಕೈಗೊಂಡಿದ್ದ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ನೀಡಿರುವ ಹಣ ಮತ್ತು ಕಾಣಿಕೆ ಬಾಕ್ಸ್‌ಗಳ ಎಣಿಕೆಯಲ್ಲಿ ಏನಾದರೂ ಲೋಪ ನಡೆದಿದೆಯೇ ಎಂಬ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಕೇರಳ ಹೈಕೋರ್ಟ್, ತಿರುವಾಂಕೂರು ದೇವಸ್ಥಾನ ಮಂಡಳಿಯ(ಟಿಡಿಬಿ) ಜಾಗೃತ ದಳಕ್ಕೆ ಆದೇಶಿಸಿದೆ.

ಭಕ್ತರು ನೀಡಿರುವ ಕಾಣಿಕೆ ಅಥವಾ ದೇಣಿಗೆ ಪ್ಯಾಕೆಟ್‌ಗಳಲ್ಲಿನ ಹಣವನ್ನು ಎಣಿಕೆ ಮಾಡದ ಕಾರಣ, ಅದರಲ್ಲಿರುವ ನೋಟುಗಳು ಹಾಳಾಗಿದ್ದು, ಬಳಸಲು ಯೋಗ್ಯವಲ್ಲದಂತಾಗಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್, ಪಿ ಜಿ ಅಜಿತ್ ಕುಮಾರ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು ಪರಿಶೀಲನೆಗೆ ಆದೇಶಿಸಿದೆ.

ಈ ಕುರಿತಂತೆ ಶಬರಿಮಲೆಯ ವಿಶೇಷ ಆಯುಕ್ತರಿಂದಲೂ ಕೋರ್ಟ್ ವರದಿ ಕೇಳಿತ್ತು. ಆಯುಕ್ತರು ಸಲ್ಲಿರುವ ವರದಿಯಲ್ಲಿ, ಅಪಾರ ಪ್ರಮಾಣದ ನೋಟು ಮತ್ತು ನಾಣ್ಯಗಳು ವಿವಿಧ ಪೂಜೆಗಳ ಮೂಲಕ ಕಾಣಿಕೆಯಾಗಿ ಬಂದಿವೆ. ಭಂಡಾರದಲ್ಲಿರುವ ಹಣ ಮತ್ತು ಕಾಣಿಕೆಗಳ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಧಿಕ ಪ್ರಮಾಣದ ನಾಣ್ಯಗಳು ಬಂದಿದ್ದು, ಜನವರಿ 20ರಂದು ದೇಗುಲದ ಬಾಗಿಲು ಮುಚ್ಚುವ ವೇಳೆಗೆ ಎಣಿಕೆ ಮುಗಿಯುವುದಿಲ್ಲ. ಜಾಗದ ಕೊರತೆಯಿಂದಾಗಿ ನಾಣ್ಯಗಳ ಎಣಿಕೆ ಪ್ರಕ್ರಿಯೆಯನ್ನು ಅನ್ನದಾನ ಮಂಟಪದಲ್ಲೂ ನಡೆಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ. 

ಅಲ್ಲದೆ, ಎಣಿಕೆಯ ಮೇಲ್ವಿಚಾರಣೆಯನ್ನು ತಾವೇ ನಡೆಸುತ್ತಿದ್ದು, ಪ್ರಕ್ರಿಯೆ ಕುರಿತಂತೆ ಮತ್ತೊಂದು ವರದಿ ಸಲ್ಲಿಸುವುದಾಗಿ ಆಯುಕ್ತರು ಕೋರ್ಟ್‌ಗೆ ತಿಳಿಸಿದ್ದಾರೆ.

2 ತಿಂಗಳ ವಾರ್ಷಿಕ ಶಬರಿಮಲೆ ಯಾತ್ರೆ ಸಂದರ್ಭ ಜನವರಿ 12ರವರೆಗೆ 310.40 ಕೋಟಿ ಕಾಣಿಕೆ ಸಂಗ್ರಹವಾಗಿದೆ ಎಂದು ಜನವರಿ 13ರಂದು ಟಿಡಿಬಿ ಹೇಳಿತ್ತು.

ಒಟ್ಟು 310,40,97,309 ರೂ ಹಣದಲ್ಲಿ 231,55,32,006 ರೂ ರಷ್ಟು ಹಣವು ಡಿಸೆಂಬರ್ 27ಕ್ಕೆ ಅಂತ್ಯಗೊಂಡ ಮಂಡಲ ಪೂಜೆ ಅವಧಿಯಲ್ಲೇ ಬಂದಿದೆ. ಉಳಿದ 78,85,65,303 ರೂ ಹಣವು ಡಿಸೆಂಬರ್ 30ರಿಂದ ನಡೆಯುತ್ತಿರುವ ‘ಮಕರ ಜ್ಯೋತಿ’ ಸಮಯದಲ್ಲಿ ಬಂದಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಕೋರ್ಟ್ ಗೆ ತಿಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com