ವಸಾಹತುಶಾಹಿ ಆಳ್ವಿಕೆ ವಿರುದ್ಧ ಉಗ್ರ ಪ್ರತಿರೋಧಕ್ಕಾಗಿ ನೇತಾಜಿ ಅವರನ್ನು ಸ್ಮರಿಸಲಾಗುತ್ತದೆ: ಪ್ರಧಾನಿ ಮೋದಿ

ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮದಿನ ಹಿನ್ನೆಲೆಯಲ್ಲಿ ನೇತಾಜಿಯವರಿಗೆ ಗೌರವ ಸಲ್ಲಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಭಾರತದ ಇತಿಹಾಸಕ್ಕೆ ಅವರು ನೀಡಿರುವ ಅಪ್ರತಿಮ ಕೊಡುಗೆಯನ್ನು ಸ್ಮರಿಸಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ನವದೆಹಲಿ: ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮದಿನ ಹಿನ್ನೆಲೆಯಲ್ಲಿ ನೇತಾಜಿಯವರಿಗೆ ಗೌರವ ಸಲ್ಲಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಭಾರತದ ಇತಿಹಾಸಕ್ಕೆ ಅವರು ನೀಡಿರುವ ಅಪ್ರತಿಮ ಕೊಡುಗೆಯನ್ನು ಸ್ಮರಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು,  “ಇಂದು, ಪರಾಕ್ರಮ್ ದಿವಸ್‌, ನಾನು ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಭಾರತದ ಇತಿಹಾಸಕ್ಕೆ ಅವರ ಅಪ್ರತಿಮ ಕೊಡುಗೆಯನ್ನು ಸ್ಮರಿಸಿಕೊಳ್ಳುತ್ತೇನೆ. ವಸಾಹತುಶಾಹಿ ಆಳ್ವಿಕೆ ವಿರುದ್ಧ ಅವರ ತೀವ್ರ ಪ್ರತಿರೋಧಕ್ಕಾಗಿ ಅವರನ್ನು ಸದಾ ಸ್ಮರಿಸಲಾಗುತ್ತದೆ. ಭಾರತಕ್ಕಾಗಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಾವು ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.

ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಶಾಶ್ವತವಾಗಿ ಬರೆಯಲ್ಪಡುವ ಹೆಸರುಗಳಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕೂಡ ಒಬ್ಬರಾಗಿದ್ದಾರೆ. ಅವರು ದೇಶಕ್ಕಾಗಿ ದುಡಿದ ರೀತಿ, ಬ್ರಿಟಿಷರ ವಿರುದ್ಧ ದೇಶವಾಸಿಗಳನ್ನು ಕೆರಳಿಸಿದ ರೀತಿ ಬೇರೆ ಯಾವ ವ್ಯಕ್ತಿಗೂ ಸಾಧ್ಯವಾಗಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅವರ ಸಾವಿನ ಬಗ್ಗೆ ಹಲವು ಅನುಮಾನಗಳಿದ್ದರೂ ಅವರು ಬಿತ್ತಿ ಹೋದ ದೇಶಭಕ್ತಿ ಎಂದಿಗೂ ಸಾಯುವುದಿಲ್ಲ. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಅವರು ಶಾಶ್ವತವಾಗಿ ಇರುತ್ತಾರೆ.

ಇಂದು ಜನವರಿ 23, ಇಡೀ ರಾಷ್ಟ್ರವು ಅವರ ಜನ್ಮದಿನದಂದು ಅವರನ್ನು ನೆನಪಿಸಿಕೊಳ್ಳುತ್ತಿದೆ. ಈ ದಿನದಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ಆಚರಿಸಲಾಗುತ್ತದೆ, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪರಾಕ್ರಮ್ ದಿವಸ್ ಎಂದು ಘೋಷಿಸಿದ್ದಾರೆ.  ಈ ವಿಶೇಷ ದಿನದಂದು ನೇತಾಜಿ ಅವರಿಗೆ ರಾಷ್ಟ್ರ ವಿಶೇಷ ಗೌರವ ಸಲ್ಲಿಸುತ್ತದೆ.

ಅಂಡಮಾನ್ ಮತ್ತು ನಿಕೋಬಾರ್‌ನ 21 ದ್ವೀಪಗಳಿಗೆ ವೀರರ ಹೆಸರು ನಾಮಕರಣ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ಅನ್ನು ಪರಾಕ್ರಮ್ ದಿವಸ್ ಎಂದು ಘೋಷಿಸಿರುವ ಕೇಂದ್ರ ಸರ್ಕಾರ ಇಂದು (ಸೋಮವಾರ) ಹೆಸರಿಲ್ಲದ  ದ್ವೀಪಗಳಿಗೆ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲು ಮುಂದಾಗಿದೆ.

ಮೇಜರ್ ಸೋಮನಾಥ ಶರ್ಮಾ, ನಾಯಕ್ ಜಾದುನಾಥ್ ಸಿಂಗ್, ಕಂಪನಿ ಹವಾಲ್ದಾರ್ ಮೇಜರ್ ಪೀರು ಸಿಂಗ್, ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ, ಮೇಜರ್ ರಾಮಸ್ವಾಮಿ ಪರಮೇಶ್ವರನ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಮತ್ತು ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಸೇರಿದಂತೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಈ ದ್ವೀಪಗಳಿಗೆ ಇಡಲಾಗುತ್ತದೆ.

ರಾಷ್ಟ್ರದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಅಪ್ರತಿಮ ತ್ಯಾಗ ಮಾಡಿದ ದೇಶದ ವೀರರಿಗೆ ಈ ನಿರ್ಧಾರ ಶಾಶ್ವತ ಗೌರವವಾಗಿದೆ.

ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ದೊಡ್ಡ  ದ್ವೀಪಗಳಿಗೆ ನಾಮಕರಣ ಮಾಡುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲಿರುವ ನೇತಾಜಿಗೆ ಮೀಸಲಾಗಿರುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಮೋದಿ ಅವರು ಅನಾವರಣಗೊಳಿಸಲಿದ್ದಾರೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗೌರವಾರ್ಥ 2018ರಲ್ಲಿ ರಾಸ್ ದ್ವೀಪಗಳನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ. ನೀಲ್ ದ್ವೀಪ ಮತ್ತು ಹ್ಯಾವ್ಲಾಕ್ ದ್ವೀಪವನ್ನು ಶಹೀದ್ ದ್ವೀಪ ಮತ್ತು ಸ್ವರಾಜ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com