ಕನಿಷ್ಠ 5 ಕೇಕ್‌ಗಳನ್ನಾದರೂ ಕತ್ತರಿಸಬೇಕು: ಪೆರೋಲ್ ಮೇಲೆ ಹೊರಬಂದು ಖಡ್ಗದಿಂದ ಕೇಕ್ ಕತ್ತರಿಸಿದ ಅತ್ಯಾಚಾರ ಆರೋಪಿ ರಾಮ್ ರಹೀಮ್

ಪೆರೋಲ್ ಮೇಲೆ ಹೊರಬಂದಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್, ಖಡ್ಗದಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್
ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್

ನವದೆಹಲಿ: ಪೆರೋಲ್ ಮೇಲೆ ಹೊರಬಂದಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್, ಖಡ್ಗದಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಅತ್ಯಾಚಾರ ಮತ್ತು ಕೊಲೆ ಆರೋಪ ಹಿನ್ನೆಲೆಯಲ್ಲಿ ಗುರ್ಮೀತ್ ಅವರು 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದು, ಶನಿವಾರ ಹರಿಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಿಂದ 40 ದಿನಗಳ ಪೆರೋಲ್‌ ಮೇಲೆ ಹೊರಬಂದಿದ್ದಾರೆ.

ಪೆರೋಲ್ ಮೇಲೆ ಹೊರಬಂದ ಗುರ್ಮೀತ್ ರಾಮ್ ರಹೀಮ್ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿರುವ ಬರ್ನಾವಾ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಬೃಹತ್ ಗಾತ್ರದ ಕೇಕ್'ನ್ನು ಖಡ್ಗದಿಂದ ಕತ್ತರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಜಾಮೀನು ಅರ್ಜಿಯಲ್ಲಿ ರಾಮ್ ರಹೀಮ್ ಅವರು ಜನವರಿ 25 ರಂದು ಮಾಜಿ ಡೇರಾ ಮುಖ್ಯಸ್ಥ ಷಾ ಸತ್ನಾಮ್ ಸಿಂಗ್ ಅವರ ಜನ್ಮ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗವಹಿಸಲು ಬಯಸುವುದಾಗಿ ಹೇಳಿದ್ದರು.

ಐದು ವರ್ಷಗಳ ನಂತರ ಈ ರೀತಿ ಆಚರಿಸಲು ಅವಕಾಶ ಸಿಕ್ಕಿದೆ. ಹಾಗಾಗಿ ಕನಿಷ್ಠ ಐದು ಕೇಕ್‌ಗಳನ್ನಾದರೂ ಕತ್ತರಿಸಬೇಕು. ಇದು ಮೊದಲ ಕೇಕ್ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಶಸ್ತ್ರಾಸ್ತ್ರಗಳ ಕಾಯ್ದೆ ಪ್ರಕಾರ ಶಸ್ತ್ರಾಸ್ತ್ರಗಳ ಸಾರ್ವಜನಿಕ ಪ್ರದರ್ಶನವನ್ನು (ಕತ್ತಿಯಿಂದ ಕೇಕ್ ಕತ್ತರಿಸುವುದು) ನಿಷೇಧಿಸಲಾಗಿದೆ.

ರಾಮ್ ರಹೀಮ್ ಸೋಮವಾರ ಹರ್ಯಾಣ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಅನೇಕ ಸ್ಥಳಗಳಲ್ಲಿ ತಮ್ಮ ಪಂಥದ ಸ್ವಯಂಸೇವಕರು ಆಯೋಜಿಸಿದ್ದ ಮೆಗಾ ಸ್ವಚ್ಛತಾ ಅಭಿಯಾನವನ್ನು ಉದ್ಘಾಟಿಸಿದ್ದರು.

ರಾಜ್ಯಸಭಾ ಸಂಸದ ಕ್ರಿಶನ್ ಲಾಲ್ ಪನ್ವಾರ್ ಮತ್ತು ಮಾಜಿ ಸಚಿವ ಕ್ರಿಶನ್ ಕುಮಾರ್ ಬೇಡಿ ಸೇರಿದಂತೆ ಹರಿಯಾಣದ ಕೆಲವು ಹಿರಿಯ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಳೆದ 14 ತಿಂಗಳಲ್ಲಿ ಇದು 4ನೇ ಬಾರಿ ಮತ್ತು 3 ತಿಂಗಳೊಳಗೆ ಎರಡನೇ ಬಾರಿಗೆ ರಾಮ್ ರಹೀಮ್‌ಗೆ ಪೆರೋಲ್ ನೀಡಲಾಗಿದೆ. ಇದಕ್ಕೂ ಮೊದಲು, ಹರಿಯಾಣ ಪಂಚಾಯತ್ ಚುನಾವಣೆ ಮತ್ತು ಆದಂಪುರ ವಿಧಾನಸಭಾ ಉಪಚುನಾವಣೆಗೆ ಮುಂಚಿತವಾಗಿ ಅವರನ್ನು ಅಕ್ಟೋಬರ್ 2022 ರಲ್ಲಿ 40 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com