3000 ರೂಪಾಯಿಗಾಗಿ ದಲಿತ ಯುವಕನಿಗೆ ತೀವ್ರ ಥಳಿತ, ಚಿಕಿತ್ಸೆ ಫಲಸದೆ ಸಾವು!

ಮೂರು ಸಾವಿರ ರುಪಾಯಿಗಾಗಿ ದಲಿತ ಯುವಕನೋರ್ವನಿಗೆ ನಾಲ್ವರು ಯುವಕರು ತೀವ್ರವಾಗಿ ಥಳಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿರುವ ಘಟನೆ ಗುರುಗ್ರಾಮ್ ನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗುರುಗ್ರಾಮ್‌: ಮೂರು ಸಾವಿರ ರುಪಾಯಿಗಾಗಿ ದಲಿತ ಯುವಕನೋರ್ವನಿಗೆ ನಾಲ್ವರು ಯುವಕರು ತೀವ್ರವಾಗಿ ಥಳಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿರುವ ಘಟನೆ ಗುರುಗ್ರಾಮ್ ನಲ್ಲಿ ನಡೆದಿದೆ. 

ನಾಲ್ವರು ಯುವಕ ತಂಡ 33 ವರ್ಷದ ದಲಿತ ಯುಕನಿಗೆ ಮಂಗಳವಾರ ರಾತ್ರಿ ದೊಣ್ಣೆಗಳಿಂದ ಮನಬಂದಂತೆ ಥಳಿಸಿ ನಂತರ ಆತನನ್ನು ಮನೆಯ ಹೊರಗೆ ಬಿಟ್ಟು ಹೋಗಿದ್ದರು. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದರೆ ಆತ ಬುಧವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಇಂದರ್ ಕುಮಾರ್ ಘೋಷ್‌ಗಢ್‌ನಲ್ಲಿರುವ ತನ್ನ ಮನೆಯಲ್ಲಿ ದಿನಸಿ ಅಂಗಡಿಯನ್ನು ನಡೆಸುತ್ತಿದ್ದನು. ನಾಲ್ಕು ದಿನಗಳ ಹಿಂದೆ ಅದೇ ಗ್ರಾಮದ ಸಾಗರ್ ಯಾದವ್ ಎಂಬುವರು ವಿದ್ಯುತ್ ಬಿಲ್ ಪಾವತಿಸಲು ಇಂದರ್ ಗೆ 19 ಸಾವಿರ ರೂಪಾಯಿ ನೀಡಿದ್ದರು. ಇದರಲ್ಲಿ 3,000 ರೂ.ಗಳನ್ನು ಇಂದರ್ ಖರ್ಚು ಮಾಡಿದ್ದರಿಂದ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಲಿಲ್ಲ. ಆದರೆ ಸೋಮವಾರ ಸಾಗರ್ ಮನೆಗೆ ಬಂದು 16,000 ರೂ.ಗಳನ್ನು ತೆಗೆದುಕೊಂಡು ಉಳಿದ ಹಣವನ್ನು ಆದಷ್ಟು ಬೇಗ ಹಿಂದಿರುಗಿಸುವಂತೆ ಇಂದರ್‌ಗೆ ತಿಳಿಸಿದ್ದರು.

ಮಂಗಳವಾರ ಸಂಜೆ ಸಾಗರ್ ತನ್ನ ಮಗನನ್ನು ಗ್ರಾಮದ ದೇವಸ್ಥಾನವೊಂದರ ಬಳಿ ಕರೆದಿದ್ದಾರೆ. ಅಲ್ಲಿ ಆತನಿಗೆ ಚೆನ್ನಾಗಿ ಥಳಿಸಿ ನಂತರ ಆತನನ್ನು ಮನೆಯ ಬಳಿ ಬಿಟ್ಟು ಹೋಗಿದ್ದರು. ಇನ್ನು ಸಾಗರ್, ಆಜಾದ್, ಮುಖೇಶ್ ಮತ್ತು ಹಿತೇಶ್ ದೊಣ್ಣೆಯಿಂದ ತನಗೆ ಹೊಡೆದಿದ್ದಾರೆ ಎಂದು ಇಂದರ್ ಹೇಳಿದ್ದಾಗಿ ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ನಾಲ್ವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತರ ಶವವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಿದ್ದೇವೆ ಎಂದು ಬಿಲಾಸ್‌ಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ರಾಹುಲ್ ದೇವ್ ಹೇಳಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ನಮ್ಮ ತಂಡ ನಿರಂತರ ಪ್ರಯತ್ನ ನಡೆಸುತ್ತಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com