ಪ್ರಧಾನಿ ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ 13 ವಿದ್ಯಾರ್ಥಿಗಳ ಬಂಧನ

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ, ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ಕೇರಳದ ಕೆಲವು ಕ್ಯಾಂಪಸ್‌ಗಳು 2002ರ ಗೋಧ್ರಾ ಗಲಭೆ ಕುರಿತಾದ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ ಒಂದು ದಿನದ ನಂತರ, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಎಡ ಸಂಯೋಜಿತ ವಿದ್ಯಾರ್ಥಿ ತಂಡಗಳು ಡಾಕ್ಯುಮೆಂಟರಿಯನ್ನು ಪ್ರದರ್ಶಿಸಲು ಪ್ರಯತ್ನಿಸಿದವು. 
ಜಾದವ್‌ಪುರ ವಿಶ್ವವಿದ್ಯಾನಿಲಯ
ಜಾದವ್‌ಪುರ ವಿಶ್ವವಿದ್ಯಾನಿಲಯ

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ, ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ಕೇರಳದ ಕೆಲವು ಕ್ಯಾಂಪಸ್‌ಗಳು 2002ರ ಗೋಧ್ರಾ ಗಲಭೆ ಕುರಿತಾದ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ ಒಂದು ದಿನದ ನಂತರ, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಎಡ ಸಂಯೋಜಿತ ವಿದ್ಯಾರ್ಥಿ ತಂಡಗಳು ಡಾಕ್ಯುಮೆಂಟರಿಯನ್ನು ಪ್ರದರ್ಶಿಸಲು ಪ್ರಯತ್ನಿಸಿದವು. ಆದರೆ, ಆಡಳಿತ ಮಂಡಳಿ ಮತ್ತು ಪೊಲೀಸರು ಅದನ್ನು ವಿಫಲಗೊಳಿಸಿದರು. 

ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ನಿಗದಿಪಡಿಸಿದ್ದ ಗಂಟೆಗಳ ಮೊದಲು, ದೆಹಲಿ ಪೊಲೀಸರು ಹನ್ನೆರಡು ವಿದ್ಯಾರ್ಥಿಗಳನ್ನು ಬಂಧಿಸಿದರು.

ಪೊಲೀಸ್ ಉಪ ಆಯುಕ್ತ (ಆಗ್ನೇಯ) ಇಶಾ ಪಾಂಡೆ ಮಾತನಾಡಿ, ಜಾಮಿಯಾ ವಿಶ್ವವಿದ್ಯಾಲಯದ ಆಡಳಿತವು ಕೆಲವು ವಿದ್ಯಾರ್ಥಿಗಳು ಬೀದಿಗಳಲ್ಲಿ ಗಲಾಟೆ ಸೃಷ್ಟಿಸುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿತು. ನಂತರ ಸಂಜೆ 4 ಗಂಟೆ ಸುಮಾರಿಗೆ ಪ್ರದೇಶದಲ್ಲಿ ಶಾಂತಿ ಕಾಪಾಡಲು 13 ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ಅವರಲ್ಲಿ ನಾಲ್ವರು ಎಸ್‌ಎಫ್‌ಐ ಸದಸ್ಯರು ಎಂದು ತಿಳಿಸಿದರು.

ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಯಾವುದೇ ಕೂಟ ಅಥವಾ ಪ್ರದರ್ಶನದಲ್ಲಿ ಭಾಗವಹಿಸದಂತೆ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಸೂಚಿಸಿತ್ತು. ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯಾವುದೇ ಅನುಮತಿಯನ್ನು ನೀಡಿಲ್ಲ. ವಿದ್ಯಾರ್ಥಿಗಳು ನಿರ್ದೇಶನಗಳನ್ನು ಪಾಲಿಸಲು ವಿಫಲವಾದರೆ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಸಹ ಅದು ಎಚ್ಚರಿಸಿದೆ.

ದಿನವಿಡೀ ವಿಶ್ವವಿದ್ಯಾನಿಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸರು ಎರಡೂ ಬದಿಗಳಲ್ಲಿ ಗಲಭೆ ನಿಗ್ರಹ ವಾಹನಗಳು ಮತ್ತು ಬಸ್‌ಗಳನ್ನು ಬಳಸಿ ಸುಮಾರು 1 ಕಿ.ಮೀ. ಉದ್ದದ ರಸ್ತೆಯನ್ನು ಬ್ಲಾಕ್ ಮಾಡಿದ್ದರು.

ಯಾವುದೇ ಗದ್ದಲದ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ವಿಶ್ವವಿದ್ಯಾನಿಲಯದ ಗೇಟ್ ಮುಂದೆ ಜಲಫಿರಂಗಿಗಳನ್ನು ಇರಿಸಿದ್ದರು. ಆದರೆ, ಪ್ರತಿಭಟನೆಯನ್ನು ತಕ್ಷಣವೇ ನಿಭಾಯಿಸಿದ ಕಾರಣ ಅದನ್ನು ಬಳಸಲಿಲ್ಲ.

ಈಮಧ್ಯೆ, ಜ. 27 ರಂದು ಕೋಲ್ಕತ್ತಾದ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಬಯಲು ಮೈದಾನದಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಾಗಿ ಎಸ್‌ಎಫ್‌ಐ ತಿಳಿಸಿದೆ. ವಿದ್ಯಾರ್ಥಿಗಳ ಪ್ರತ್ಯೇಕ ಗುಂಪು ಫೆಬ್ರವರಿ 1 ರಂದು ವಿಶ್ವವಿದ್ಯಾನಿಲಯದಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಿದೆ ಎಂದು ಹೇಳಿದೆ. ಅಖಿಲ ಭಾರತ ವಿದ್ಯಾರ್ಥಿಗಳ ಸಂಘವು ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಇದೇ ರೀತಿಯ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com