74ನೇ ಗಣರಾಜ್ಯೋತ್ಸವ ಸಂಭ್ರಮ: ಪಥಸಂಚಲನಕ್ಕೆ ಕರ್ತವ್ಯಪಥ ಸಜ್ಜು, ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿದ ಭದ್ರತೆ

74ನೇ ಗಣರಾಜೋತ್ಸವ ಪರೇಡ್‍ಗೆ ದೆಹಲಿಯ ಕರ್ತವ್ಯ ಪಥ್ ಸಿದ್ಧವಾಗಿದ್ದು, ಈ ಬಾರಿಯ ಗಣರಾಜ್ಯೋತ್ಸಕ್ಕೆ ಈಜಿಪ್ಟ್ ಅಧ್ಯಕ್ಷರು ವಿಶೇಷ ಅತಿಥಿಯಾಗಿ ಭಾಗಿಯಾಗುತ್ತಿದ್ದಾರೆ. ಪರೇಡ್‌ಗೆ 65,000 ಮಂದಿ ಸಾಕ್ಷಿಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆಯನ್ನು ನಿಯೋಜನೆಗೊಳಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 74ನೇ ಗಣರಾಜೋತ್ಸವ ಪರೇಡ್‍ಗೆ ದೆಹಲಿಯ ಕರ್ತವ್ಯ ಪಥ್ ಸಿದ್ಧವಾಗಿದ್ದು, ಈ ಬಾರಿಯ ಗಣರಾಜ್ಯೋತ್ಸಕ್ಕೆ ಈಜಿಪ್ಟ್ ಅಧ್ಯಕ್ಷರು ವಿಶೇಷ ಅತಿಥಿಯಾಗಿ ಭಾಗಿಯಾಗುತ್ತಿದ್ದಾರೆ. ಪರೇಡ್‌ಗೆ 65,000 ಮಂದಿ ಸಾಕ್ಷಿಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆಯನ್ನು ನಿಯೋಜನೆಗೊಳಿಸಲಾಗಿದೆ.

ಕ್ಯುಆರ್‌ ಕೋಡ್‌ ಮೂಲಕ ನೋಂದಣಿ ಆದವರಿಗೆ ಪರೇಡ್‌ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಸುಮಾರು 6,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಇದರದಲ್ಲಿ ಅರೆಮಿಲಿಟರಿ ಪಡೆ, ಎನ್‌ಎಸ್‌ಜಿ ಮತ್ತು ದಿಲ್ಲಿ ಪೊಲೀಸರು ಇದ್ದಾರೆ. 150 ಸಿಸಿಟಿವಿ ಕ್ಯಾಮೆರಾಗಳನ್ನು ಕರ್ತವ್ಯಪಥದಲ್ಲಿ ಅಳವಡಿಸಲಾಗಿದೆ. ಬೆಳಗ್ಗೆ 10.00ಕ್ಕೆ ಪರೇಡ್‌ ಆರಂಭವಾಗಲಿದ್ದು, ಇದಕ್ಕೂ ಮುನ್ನ ಬೆಳಗ್ಗೆ 7.30ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ.

10:30ಕ್ಕೆ ಪರೇಡ್‍ಗೆ ಚಾಲನೆ ಸಿಗಲಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ದೇಶಿಯ ಸೇನಾ ಆಯುಧಗಳನ್ನು ಪರೇಡ್‍ನಲ್ಲಿ ಪ್ರದರ್ಶನ ಮಾಡಲಾಗುತ್ತದೆ.

ಕರ್ನಾಟಕ ಸೇರಿ 17 ರಾಜ್ಯಗಳ ಸ್ತಬ್ಧಚಿತ್ರಗಳು ಪರೇಡ್‍ನಲ್ಲಿ ಪ್ರದರ್ಶನಗೊಳ್ಳಲಿದೆ. ನಾರಿ ಶಕ್ತಿ ಪರಿಕಲ್ಪನೆಯಡಿಯಲ್ಲಿ ಕರ್ನಾಟಕ ತನ್ನ ಸ್ತಬ್ಧ ಚಿತ್ರಪ್ರದರ್ಶಿಸಲಿದೆ. ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ, ಹಾಲಕ್ಕಿ ತುಳಸಿಗೌಡ ಮತ್ತು ಸೂಲಗಿತ್ತಿ ನರಸಮ್ಮ ಸಾಧನೆಯನ್ನು ಟ್ಯಾಬ್ಲೋ ಮೂಲಕ ಇಡೀ ದೇಶಕ್ಕೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಟ್ಯಾಬ್ಲೊ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸುಗ್ಗಿ, ಕೊಪ್ಪಳದ ಕುಕನೂರು ಮೂಲದ ನಂದಿ ಧ್ವಜ ಸೇರಿದಂತೆ ಭರತನಾಟ್ಯ ಕಲಾವಿದರು ಪರೇಡ್‍ನಲ್ಲಿ ಭಾಗಿಯಾಗಲಿದ್ದಾರೆ.

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಮೇಕ್ ಇನ್ ಇಂಡಿಯಾ, ನಾರಿಶಕ್ತಿಗೆ ಆದ್ಯತೆ ನೀಡಲಾಗಿದ್ದು, ಮೊದಲ ಬಾರಿ ಗನ್ ಸೆಲ್ಯೂಟ್‍ಗಾಗಿ ಸ್ವದೇಶಿ 105 ಎಂಎಂ ಗನ್ ಬಳಸಲಾಗಿದೆ. 9 ರಫೇಲ್ ಯುದ್ಧ ವಿಮಾನಗಳಿಂದ ವೈಮಾನಿಕ ಪ್ರದರ್ಶನ (ಒಟ್ಟು 44 ವಿಮಾನ) ಹಾಗೂ ಮೊದಲ ಬಾರಿ ನೌಕಾಪಡೆಯ ಐಎಲ್-38 ಸಮರ ವಿಮಾನ ಹಾರಾಟ (ಸಮುದ್ರ ವಿಚಕ್ಷಣ ವಿಮಾನ) ಮಾಡಿಸಲಾಗುತ್ತಿದೆ.

3500 ದೇಶಿ ಡ್ರೋನ್‍ಗಳ ಶೋ, 3ಡಿ ಅನಾಮೋರ್ಫಿಕ್ ಪ್ರೊಜೆಕ್ಷನ್, ಮೊದಲ ಬಾರಿ ಮಿಲಿಟರಿ ಟ್ಯಾಟೂ ಎಂಬ ಸಶಸ್ತ್ರ ಪಡೆಯಿಂದ ನೃತ್ಯ ಆಯೋಜಿಸಲಾಗಿದೆ. ಮಹಿಳಾ ಅಧಿಕಾರಿ ನೇತೃತ್ವದಲ್ಲಿ ಡೇರ್ ಡೆವಿಲ್ಸ್ ಮೋಟಾರ್ ಸೈಕಲ್ ಕಸರತ್ತು ಇದೆ. ನೌಕಾ ಪಡೆಯ ಮಹಿಳಾ ತುಕಡಿಗೆ ಮಂಗಳೂರಿನ ದಿಶಾ ಅಮೃತ್ ನೇತೃತ್ವ ವಹಿಸಲಿದ್ದು, ಪರೇಡ್‍ನಲ್ಲಿ ಈಜಿಪ್ಟ್ ದೇಶದ ಸೇನಾ ತುಕಡಿ ಭಾಗವಹಿಸಲಿದೆ. ರಾಜಪಥ್‍ನಿಂದ ಕರ್ತವ್ಯ ಪಥ್ ಆಗಿ ಬದಲಾದ ಬಳಿಕ ಮೊದಲ ಗಣರಾಜೋತ್ಸವ ಇದಾಗಿದ್ದು, ವಿಶೇಷತೆಗಳಿಂದ ಕೂಡಿದೆ.

ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್ ಫತೇಹ್‌ ಅಲ್‌ ಸಿಸಿ ಅವರು ಭಾಗವಹಿಸುತ್ತಿದ್ದಾರೆ. 4 ದಿನಗಳ ಭಾರತ ಭೇಟಿಗೋಸ್ಕರ ನವದೆಹಲಿಗೆ ಬಂದಿಳಿದಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಅವರಿಗೆ ಆತಿಥ್ಯ ನೀಡಲಾಗುತ್ತಿದೆ.

ಬೆಳಗ್ಗೆ 10.30ಕ್ಕೆ ಪಥ ಸಂಚಲನ ಆರಂಭವಾಗಲಿದ್ದು, ಜನತೆ ಮನೆಯಲ್ಲಿಯೇ ಕುಳಿತುಕೊಂಡು ದೂರದರ್ಶನ ಸೇರಿದಂತೆ ಟಿ.ವಿ ಚಾನೆಲ್‌ಗಳಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಜನವರಿ 29ಕ್ಕೆ ಗಣರಾಜ್ಯೋತ್ಸವ ಆಚರಣೆಗಳು ಮುಕ್ತಾಯಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com