ಚಂದ್ರಶೇಖರ್ ರಿಂದ ರಾಹುಲ್ ಗಾಂಧಿವರೆಗೆ: ಜನತೆಯ ಗಮನ ಕೇಂದ್ರೀಕರಿಸಲು ರಾಜಕಾರಣಿಗಳು ನಡೆಸಿದ ಯಾತ್ರೆಗಳ ಸಂಪೂರ್ಣ ವಿವರ!

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಳೆದ 145 ದಿನಗಳಲ್ಲಿ ಕಾಲ 12 ರಾಜ್ಯಗಳನ್ನು ದಾಟಿ ಭಾರತ್ ಜೋಡೋ ಯಾತ್ರೆ ಸಂಪೂರ್ಣಗೊಳಿಸಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಭಾರತದಲ್ಲಿ ರಾಜಕೀಯ ನಾಯಕರು ಕೈಗೊಂಡ ಗಮನಾರ್ಹ ಪಾದಯಾತ್ರೆಗಳ ವಿವರ ಇಲ್ಲಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ

ಶ್ರೀನಗರ:  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಳೆದ 145 ದಿನಗಳಲ್ಲಿ ಕಾಲ 12 ರಾಜ್ಯಗಳನ್ನು ದಾಟಿ ಭಾರತ್ ಜೋಡೋ ಯಾತ್ರೆ ಸಂಪೂರ್ಣಗೊಳಿಸಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು ಕಳೆದ ವರ್ಷ ಸೆಪ್ಟೆಂಬರ್ 8 ರಂದು ಪ್ರಾರಂಭವಾಯಿತು. ಇತ್ತೀಚಿನ ದಶಕಗಳಲ್ಲಿ ಭಾರತದಲ್ಲಿ ರಾಜಕೀಯ ನಾಯಕರು ಕೈಗೊಂಡ ಗಮನಾರ್ಹ ಪಾದಯಾತ್ರೆಗಳ ವಿವರ ಇಲ್ಲಿದೆ.

1983, ಚಂದ್ರ ಶೇಖರ್ ಅವರ ಭಾರತ ಯಾತ್ರೆ: ಸುಮಾರು ನಾಲ್ಕು ದಶಕಗಳ ಹಿಂದೆ, ಮಾಜಿ ಪ್ರಧಾನಿ ಮತ್ತು ಆಗಿನ ಜನತಾ ಪಕ್ಷದ ನಾಯಕ ಕನ್ಯಾಕುಮಾರಿಯಿಂದ ಪಾದಯಾತ್ರೆಯನ್ನು ಕೈಗೊಂಡರು. ಜನವರಿ 6, 1983 ರಂದು ಪ್ರಾರಂಭವಾದ ಆರು ತಿಂಗಳ ನಂತರ ಯಾತ್ರೆಯು ಹೊಸ ದೆಹಲಿಯನ್ನು ತಲುಪಿತು.

ಜನರೊಂದಿಗೆ ಸಂಪರ್ಕ ಸಾಧಿಸಲು ಅವರು ತಮ್ಮ ಮೆರವಣಿಗೆಯಲ್ಲಿ ಹಳ್ಳಿ ಹಳ್ಳಿಗಳನ್ನು ಹಾದು ಹೋದಂತೆ ಅವರ ನಿಲುವು ಮತ್ತು ಯಾತ್ರೆಯ ಉದ್ದ ಏರುತ್ತಲೇ ಹೋಯಿತು. ಪಾದಯಾತ್ರೆಯನ್ನು ಬಹುಮಟ್ಟಿಗೆ ಯಶಸ್ವಿ ಎಂದು ಪರಿಗಣಿಸಿದರೂ, ಇಂದಿರಾ ಗಾಂಧಿಯವರ ಹತ್ಯೆಯಂತಹ ರಾಜಕೀಯ ಬೆಳವಣಿಗೆಗಳು 1984 ರ ಚುನಾವಣೆಯಲ್ಲಿ ಅದರ ಪ್ರಭಾವವನ್ನು ದುರ್ಬಲಗೊಳಿಸಿದವು.

1985- ಕಾಂಗ್ರೆಸ್ ಸಂದೇಶ್ ಯಾತ್ರೆ -ಮುಂಬೈನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ಲ್ಯಾನರಿಯಲ್ಲಿ ಆಗಿನ ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಗಾಂಧಿ ಅವರು ಕಾಂಗ್ರೆಸ್ ಸಂದೇಶ್ ಯಾತ್ರೆಯನ್ನು ಘೋಷಿಸಿದರು.

ಅಖಿಲ ಭಾರತ ಕಾಂಗ್ರೆಸ್ ಸೇವಾದಳ ಇದನ್ನು ಭಾರತದಾದ್ಯಂತ ನಡೆಸಿತು. ಮುಂಬೈ, ಕಾಶ್ಮೀರ, ಕನ್ಯಾಕುಮಾರಿ ಮತ್ತು ಈಶಾನ್ಯದಿಂದ ಏಕಕಾಲದಲ್ಲಿ ನಾಲ್ಕು ತಂಡಗಳಾಗಿ ಪ್ರದೇಶ ಕಾಂಗ್ರೆಸ್ ಸಮಿತಿಗಳು (ಪಿಸಿಸಿ) ಮತ್ತು ಕಾಂಗ್ರೆಸ್ ನಾಯಕರು ಯಾತ್ರೆ ನಡೆಸಿದರು. ಮೂರು ತಿಂಗಳ ನಂತರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಯಾತ್ರೆ ಮುಕ್ತಾಯವಾಯಿತು.

1990, ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದ ರಥಯಾತ್ರೆ: ಅಯೋಧ್ಯೆಯಲ್ಲಿ ರಾಮಮಂದಿರ ಚಳವಳಿಗೆ ವೇಗ ನೀಡಲು ರಥಯಾತ್ರೆಯನ್ನು ಕೈಗೊಳ್ಳಲಾಯಿತು. ಸೆಪ್ಟೆಂಬರ್ 1990 ರಲ್ಲಿ ಪ್ರಾರಂಭವಾದ ಯಾತ್ರೆಯು 10,000 ಕಿಮೀ ಕ್ರಮಿಸಿ ಅಕ್ಟೋಬರ್ 30 ರಂದು ಅಯೋಧ್ಯೆಯಲ್ಲಿ ಕೊನೆಗೊಳ್ಳಬೇಕಿತ್ತು. ಆದರೆ ಉತ್ತರ ಬಿಹಾರದ ಸಮಸ್ತಿಪುರದಲ್ಲಿ ಅದನ್ನು ನಿಲ್ಲಿಸಲಾಯಿತು ಮತ್ತು ಅಡ್ವಾಣಿ ಅವರನ್ನು ಬಂಧಿಸಲಾಯಿತು.

ರಥಯಾತ್ರೆಯು ಬಿಜೆಪಿಯ ಚುನಾವಣಾ ಮತ್ತು ಸೈದ್ಧಾಂತಿಕ ಬಲ ತುಂಬಿತು ಎಂದು ರಾಜಕೀಯ ವಿಶ್ಲೇಷಕರು ಭಾವಿಸುತ್ತಾರೆ. ದೇವಸ್ಥಾನಕ್ಕೆ ಬೇಡಿಕೆ ಹೆಚ್ಚುತ್ತಿದ್ದಂತೆ ಬಿಜೆಪಿಯ ಚುನಾವಣಾ ಭವಿಷ್ಯವೂ ಗಗನಕ್ಕೇರಿತು.

1990, ಕಾಂಗ್ರೆಸ್‌ನ ಸದ್ಭಾವನಾ ಯಾತ್ರೆ: ಇದನ್ನು ರಾಜೀವ್ ಗಾಂಧಿ ಅವರು ಅಕ್ಟೋಬರ್ 19, 1990 ರಂದು ಪ್ರಾರಂಭಿಸಿದರು ಕುತೂಹಲಕಾರಿಯಾಗಿ, ನವೆಂಬರ್ 1 ರಂದು, ರಾಜೀವ್ ಗಾಂಧಿ ಅವರು 'ಸದ್ಭಾವನಾ ಯಾತ್ರೆ' ಆರಂಭಿಸಿದ ಅದೇ ಸ್ಥಳದಲ್ಲಿ ಅಂದರೆ ಐಕಾನಿಕ್ ಚಾರ್ಮಿನಾರ್‌ನಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ತ್ರಿವರ್ಣ ಧ್ವಜವನ್ನು ಹಾರಿಸಿದರು.

1991, ಏಕತಾ ಯಾತ್ರೆ: ಈ ಯಾತ್ರೆಯನ್ನು ಆಗಿನ ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ್ ಜೋಶಿ ನೇತೃತ್ವ ವಹಿಸಿದ್ದರು ಮತ್ತು ರಾಷ್ಟ್ರೀಯ ಏಕತೆಗೆ ಬಿಜೆಪಿಯ ಬೆಂಬಲ ಮತ್ತು ಪ್ರತ್ಯೇಕತಾ ಚಳುವಳಿಗಳಿಗೆ ಅದರ ವಿರೋಧವನ್ನು ಎತ್ತಿ ತೋರಿಸಲು ಪ್ರಯತ್ನಿಸಿದರು.

ಜನವರಿ 26, 1992 ರಂದು ಶ್ರೀನಗರದ ಲಾಲ್ ಚೌಕ್‌ನಲ್ಲಿ ಜೋಶಿಯವರು ಏರ್‌ಲಿಫ್ಟ್ ಆಗುವುದರೊಂದಿಗೆ ಮತ್ತು ರಾಷ್ಟ್ರಧ್ವಜವನ್ನು ಹಾರಿಸುವುದರೊಂದಿಗೆ ಯಾತ್ರೆಯು ಮುಕ್ತಾಯವಾಯಿತು. ರಾಜಕೀಯ ವಿಶ್ಲೇಷಕರ ಪ್ರಕಾರ, ಹೆಚ್ಚಿನ ಸ್ಥಳೀಯರು ಭಾಗವಹಿಸದ ಕಾರಣ ಇದು ಕನಿಷ್ಠ ಯಶಸ್ಸನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ.

ಕಣಿವೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಕೋಲ್ಕತ್ತಾದಿಂದ ಕಾಶ್ಮೀರದ ಲಾಲ್ ಚೌಕ್‌ಗೆ 14 ದಿನಗಳ ಯಾತ್ರೆಯನ್ನು 2011 ರಲ್ಲಿ ಪಕ್ಷವು ನಡೆಸಿದಾಗ ಏಕತಾ ಯಾತ್ರೆಯನ್ನು ಪುನರಾವರ್ತಿಸಲಾಯಿತು.

2003 ರಲ್ಲಿ ಏಪ್ರಿಲ್: ಕಾಂಗ್ರೆಸ್ ನಾಯಕ ವೈ ಎಸ್ ರಾಜಶೇಖರ್ ರೆಡ್ಡಿ ಅವರು ಆಂಧ್ರಪ್ರದೇಶದಲ್ಲಿ 1,400 ಕಿಮೀ ಪಾದಯಾತ್ರೆ ಕೈಗೊಂಡಿದ್ದರು. ಅವರು ಒಂದು ವರ್ಷದ ನಂತರ ಕಾಂಗ್ರೆಸ್ ಅನ್ನು ಅದ್ಭುತ ಗೆಲುವಿನತ್ತ ಮುನ್ನಡೆಸಿದರು, ಪ್ರಸ್ತುತ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷವನ್ನು (ಟಿಡಿಪಿ) ಸೋಲಿಸಿದರು.

2004- ಬಿಜೆಪಿಯ ಭಾರತ್ ಉದಯ್ ಯಾತ್ರೆ: ಅಡ್ವಾಣಿಯವರ ಭಾರತ್ ಉದಯ್ ಯಾತ್ರೆಯು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಳ್ವಿಕೆಯಲ್ಲಿ ಭಾರತದ ಸಾಧನೆಗಳನ್ನು ಎತ್ತಿ ತೋರಿಸಿತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದ್ದರಿಂದ ಮತ್ತು ಯುಪಿಎ-I ಅಧಿಕಾರಕ್ಕೆ ಬಂದ ಕಾರಣ ಅದು ನಿರೀಕ್ಷಿತ ಚುನಾವಣಾ ಲಾಭಾಂಶವನ್ನು ನೀಡಲಿಲ್ಲ.

2017- ವೈಎಸ್ ಆರ್ ಸಿಪಿ  ಮುಖ್ಯಸ್ಥ ವೈ ಎಸ್ ಜಗನ್ ಮೋಹನ್ ರೆಡ್ಡಿಯವರಿಂದ ಯಾತ್ರೆ: ಏಪ್ರಿಲ್ 2019 ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ  ವೈಎಸ್ ಆರ್ ಸಿಪಿ ಮುಖ್ಯಸ್ಥ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು 2017 ರಲ್ಲಿ ಬೃಹತ್ ಪ್ರಜಾ ಸಂಕಲ್ಪ ಯಾತ್ರೆಯನ್ನು ಕೈಗೊಂಡರು, ಇದು ರಾಜ್ಯದಾದ್ಯಂತ 3,500 ಕಿ.ಮೀ.  ವ್ಯಾಪ್ತಿ ಕ್ರಮಿಸಿತ್ತು.

2017- ನರ್ಮದಾ ಪರಿಕ್ರಮ ಯಾತ್ರೆ: ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ನರ್ಮದಾ ತೀರದಲ್ಲಿರುವ ನರಸಿಂಗ್‌ಪುರ ಜಿಲ್ಲೆಯ ಬರ್ಮನ್ ಘಾಟ್‌ನಿಂದ 'ನರ್ಮದಾ ಪರಿಕ್ರಮ'ವನ್ನು ಕೈಗೊಂಡರು.

3,000 ಕ್ಕೂ ಹೆಚ್ಚು ಕಿಮೀ ನರ್ಮದಾ ಪರಿಕರ್ಮ ಸಂಪೂರ್ಣವಾಗಿ ಆಧ್ಯಾತ್ಮಿಕ ವ್ಯಾಯಾಮ ಎಂದು ಸಿಂಗ್ ಸಮರ್ಥಿಸಿಕೊಂಡರೂ, ಅದರ ರಾಜಕೀಯ ಪರಿಣಾಮಗಳು ಸ್ಪಷ್ಟವಾಗಿದ್ದವು. ಮಧ್ಯಪ್ರದೇಶದಲ್ಲಿ 2019 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಯಶಸ್ಸಿಗೆ ಕೊಡುಗೆ ನೀಡಿವೆ ಎಂದು ಹೇಳಿದರು.

2021- ಬಿಜೆಪಿಯ ಜನಾಶೀರ್ವಾದ ಯಾತ್ರೆ: ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಜೆಪಿ ಐದು ದಿನಗಳ ಜನಾಶೀರ್ವಾದ ಯಾತ್ರೆಯನ್ನು ಪ್ರಾರಂಭಿಸಿತು, ಇದರ ಭಾಗವಾಗಿ 39 ಕೇಂದ್ರ ಸಚಿವರನ್ನು 22 ರಾಜ್ಯಗಳನ್ನು ಕವರ್ ಮಾಡಲು ಕಳುಹಿಸಲಾಯಿತು.  ಸಚಿವರು ಜನಾಶೀರ್ವಾದ ಯಾತ್ರೆಗಳನ್ನು ಕೈಗೊಂಡು 212 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿ 19,567 ಕಿ.ಮೀ ಗಳಷ್ಟು ಸಂಚರಿಸಿ ಜನರನ್ನು ತಲುಪಿ ಸರ್ಕಾರದ ಸಾಧನೆಗಳನ್ನು ತಿಳಿಸಿದರು.

ಸೆಪ್ಟೆಂಬರ್ 2022ರಿಂದ ಜನವರಿ 30, 2023ರ ವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಲವಾರು ಪಕ್ಷದ ನಾಯಕರೊಂದಿಗೆ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದರು, ಇದು ಸವಾಲಿನ ಪ್ರಯಾಣವಾಗಿತ್ತು . ಭಾರತ್ ಜೋಡೋ ಯಾತ್ರೆ  ಮೂಲಕ ಪಕ್ಷವು ಜನರನ್ನು ತಲುಪಲು ಮತ್ತು ಅದರ ಪಕ್ಷ ಸಂಘಟನೆಯನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com