ಅಜಿತ್ ಪವಾರ್ ಕರೆದಿದ್ದ ಸಭೆ ಬಗ್ಗೆ ನನಗೆ ಗೊತ್ತಿರಲಿಲ್ಲ: ಶರದ್ ಪವಾರ್
ಪುಣೆ: ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ಅವರು ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಮುಖಂಡರು ಮತ್ತು ಶಾಸಕರ ಸಭೆಯನ್ನು ಕರೆದಿದ್ದರು. ಆದರೆ, ಪುಣೆಯಲ್ಲಿದ್ದ ಪಕ್ಷದ ಅಧ್ಯಕ್ಷ ಶರದ್ ಪವಾರ್, ನನಗೆ ಈ ಸಭೆ ಬಗ್ಗೆ ಗೊತ್ತೇ ಇರಲಿಲ್ಲ ಎಂದಿದ್ದಾರೆ.
ಅಜಿತ್ ಪವಾರ್ ಅವರ ಅಧಿಕೃತ ನಿವಾಸ ‘ದೇವಗಿರಿ’ಯಲ್ಲಿ ನಡೆದ ಸಭೆಯಲ್ಲಿ ಈಗ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಹಿರಿಯ ಎನ್‌ಸಿಪಿ ನಾಯಕ ಛಗನ್ ಭುಜಬಲ್, ಎನ್‌ಸಿಪಿಯ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಕೂಡ ಪಾಲ್ಗೊಂಡಿದ್ದರು. ಆದರೆ, ಪಕ್ಷದ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಭಾಗವಹಿಸಿರಲಿಲ್ಲ.
ಮುಂಬೈನಲ್ಲಿ ನಡೆದ ಸಭೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಶರದ್ ಪವಾರ್ ಪುಣೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಜುಲೈ 6ರಂದು ಹಿರಿಯ ನಾಯಕರ ಸಭೆ ಕರೆದಿದ್ದು, ಪಕ್ಷಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಚರ್ಚಿಸಲಾಗುವುದು ಎಂದರು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿ ಅಜಿತ್ ಪವಾರ್ ಶಾಸಕರ ಸಭೆಯನ್ನು ಕರೆಯಬಹುದಾದ ಹಕ್ಕು ಹೊಂದಿದ್ದರು ಎಂದು ಅವರು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ