ನೋಯ್ಡಾ: PUBG ಗೇಮ್ ಆಡುವಾಗ ಪರಿಚಿತನಾದ ನೋಯ್ಡಾ ವ್ಯಕ್ತಿಯೊಂದಿಗೆ ಇರಲು ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ತಮ್ಮ 4 ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿ ಆತನೊಂದಿಗೆ ಸಂಸಾರ ಹೂಡಿರುವ ಘಟನೆ ಬೆಳಕಿಗೆ ಬಂದಿದೆ.
ಗ್ರೇಟರ್ ನೋಯ್ಡಾದಲ್ಲಿ ಅಕ್ರಮವಾಗಿ ತಂಗಿದ್ದ ಪಾಕಿಸ್ತಾನಿ ಮಹಿಳೆ ಮತ್ತು ಆಕೆಯ ನಾಲ್ವರು ಮಕ್ಕಳನ್ನು ಪೊಲೀಸರು ಬಂಧಿಸಿದ್ದು, ಆಕೆ ಆನ್‌ಲೈನ್ ಗೇಮ್ PUBG ಮೂಲಕ ಪರಿಚಿತನಾದ ನೋಯ್ಡಾ ಮೂಲದ ವ್ಯಕ್ತಿಯೊಂದಿಗೆ ಇದ್ದಳು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಗ್ರೇಟರ್ ನೋಯ್ಡಾ ನಿವಾಸಿಯಾಗಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಇಬ್ಬರೂ ತಮ್ಮ ಬಾಡಿಗೆ ವಸತಿಗೃಹದಲ್ಲಿ ಇದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಗ್ರೇಟರ್ ನೋಯ್ಡಾದ ಪೊಲೀಸ್ ಉಪ ಆಯುಕ್ತ ಸಾದ್ ಮಿಯಾ ಖಾನ್ ಮಾಹಿತಿ ನೀಡಿದ್ದು, "ಪಾಕಿಸ್ತಾನಿ ಮಹಿಳೆ ಮತ್ತು ಸ್ಥಳೀಯ ಪುರುಷನನ್ನು ಬಂಧಿಸಲಾಗಿದೆ. ಮಹಿಳೆಯ ನಾಲ್ವರು ಮಕ್ಕಳೂ ಸಹ ಪೊಲೀಸ್ ವಶದಲ್ಲಿದ್ದಾರೆ. ಅವರೇ ಹೇಳಿರುವಂತೆ ಆನ್‌ಲೈನ್ ಗೇಮ್ PUBG ಮೂಲಕ ಇಬ್ಬರಿಗೂ ಪರಿಚಯ ಏರ್ಪಟ್ಟಿತ್ತು. ಈ ಪರಿಚಯ ಪ್ರೀತಿಗೆ ತಿರುಗಿದ್ದು, ಬಳಿಕ ಮಹಿಳೆ ತನ್ನ 4 ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿ ನೋಯ್ಡಾದಲ್ಲಿ ಆತನೊಂದಿಗೆ ವಾಸಿಸುತ್ತಿದ್ದಾಳೆ. ಪ್ರಸ್ತುತ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನೂ ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆ ಮುಗಿದ ನಂತರ ಹೆಚ್ಚಿನ ವಿವರಗಳು ಮತ್ತು ಸತ್ಯಗಳನ್ನು ಹಂಚಿಕೊಳ್ಳಲಾಗುವುದು ಖಾನ್ ಹೇಳಿದರು.
ನೇಪಾಳ ಮೂಲಕ ಭಾರತ ಪ್ರವೇಶ
ಇನ್ನು ಸ್ಥಳೀಯ ಪೊಲೀಸ್ ಅಧಿಕಾರಿಯ ಪ್ರಕಾರ, ಮಹಿಳೆ ಕಳೆದ ತಿಂಗಳು ಉತ್ತರ ಪ್ರದೇಶಕ್ಕೆ ಪ್ರವೇಶಿಸುವ ಮೊದಲು ತನ್ನ ಮಕ್ಕಳೊಂದಿಗೆ ನೇಪಾಳಕ್ಕೆ ತೆರಳಿ ಅಲ್ಲಿಂದ ಬಸ್ ಮೂಲಕ ಗ್ರೇಟರ್ ನೋಯ್ಡಾಕ್ಕೆ ಆಗಮಿಸಿದ್ದಳು. ಬಳಿಕ ವ್ಯಕ್ತಿಯನ್ನು ಭೇಟಿಯಾಗಿ ಆತ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ಬಾಡಿಗೆ ಮನೆ ಮಾಡಿದ್ದ. ಇದೇ ಮನೆಯಲ್ಲಿ ನಾಲ್ಕು ಮಕ್ಕಳೊಂದಿಗೆ ಮಹಿಳೆ ಮತ್ತು ಆ ವ್ಯಕ್ತಿ ವಾಸಿಸುತ್ತಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.
Advertisement