2002 ಗೋದ್ರಾ ಗಲಭೆ ಪ್ರಕರಣ: ತೀಸ್ತಾ ಸೆಟಲ್ವಾಡ್ ಮಧ್ಯಂತರ ಜಾಮೀನು ಜುಲೈ 19 ರವರೆಗೆ ವಿಸ್ತರಣೆ
ನವದೆಹಲಿ: 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ತಿರುಚಿದ ಆರೋಪದ ಹೊತ್ತಿರುವ ತೀಸ್ತಾ ಸೆಟಲ್ವಾಡ್ ಅವರಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಜುಲೈ 19 ರವರೆಗೆ ಸುಪ್ರೀಂ ಕೋರ್ಟ್ ಬುಧವಾರ ವಿಸ್ತರಿಸಿದೆ.
ತೀಸ್ತಾ ಸೆಟಲ್ವಾಡ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಕೂಡಲೇ ಪೊಲೀಸರಿಗೆ ಶರಣಾಗಬೇಕು ಎಂದು ಗುಜರಾತ್ ಹೈಕೋರ್ಟ್ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ಜುಲೈ 1ರಂದು ತಡೆಯಾಜ್ಞೆ ನೀಡಿತ್ತು. ಈಗ ಗುಜರಾತ್ ಹೈಕೋರ್ಟ್ ಆದೇಶಕ್ಕೆ ನೀಡಿದ ತಡೆಯಾಜ್ಞೆಯು ಜುಲೈ 19ರವರೆಗೆ ವಿಸ್ತರಣೆಯಾಗಿದೆ.
ಜುಲೈ 19ರಂದು ಸುಪ್ರೀಂ ಕೋರ್ಟ್ ಪ್ರಕರಣದ ಕುರಿತು ಮತ್ತೆ ವಿಚಾರಣೆ ನಡೆಸಲಿದೆ. ಆಗ, ತೀಸ್ತಾ ಸೆಟಲ್ವಾಡ್ ಅವರು ಪೊಲೀಸರಿಗೆ ಶರಣಾಗಬೇಕೋ, ಇಲ್ಲವೋ ಎಂಬುದನ್ನು ತೀರ್ಮಾನಿಸಲಿದೆ.
ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯವು ರಾತ್ರೋರಾತ್ರಿ ವಿಚಾರಣೆ ನಡೆಸಿತ್ತು.
2002ರಲ್ಲಿ ನಡೆದ ಗುಜರಾತ್ ಗುಲ್ಬರ್ಗ್ ಸೊಸೈಟಿ ಗಲಭೆಯಲ್ಲಿ ನರೇಂದ್ರ ಮೋದಿ ಸೇರಿ ಇನ್ನಿತರ ಹಲವು ಹಿರಿಯ ನಾಯಕರ ಪಾತ್ರವೇನೂ ಇಲ್ಲ ಎಂದು ಗುಜರಾತ್ ಎಸ್‌ಐಟಿ ಕ್ಲೀನ್‌ಚಿಟ್ ಕೊಟ್ಟಿತ್ತು. ಆದರೆ, ಆ ಕ್ಲೀನ್‌ಚಿಟ್ ಪ್ರಶ್ನಿಸಿ ಹಿರಿಯ ಕಾಂಗ್ರೆಸ್ ಸಂಸದ ಎಹ್ಸಾನ್ ಜಫ್ರಿ (ಗುಜರಾತ್ ಗಲಭೆಯಲ್ಲಿ ಮೃತಪಟ್ಟವರು) ಪತ್ನಿ ಜಕಿಯಾ ಜಫ್ರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವರ್ಷ ಜೂನ್ ತಿಂಗಳಲ್ಲಿ ಈ ಕೇಸ್ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಎಸ್‌ಐಟಿ ನೀಡಿದ್ದ ಕ್ಲೀನ್ಚಿಟ್ನ್ನು ಎತ್ತಿಹಿಡಿದಿತ್ತು.
ಅಷ್ಟೇ ಅಲ್ಲ ಅರ್ಜಿ ವಿಚಾರಣೆ ವೇಳೆ ‘ತೀಸ್ತಾ ಸೆಟಲ್ವಾಡ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿಗಳಾದ ಆರ್‌ಬಿ ಶ್ರೀಕುಮಾರ್ ಮತ್ತು ಸಂಜೀವ್ ಭಟ್ ಅವರ ಹೆಸರು ಉಲ್ಲೇಖಿಸಿ, ಗುಜರಾತ್ ಗಲಭೆ ವಿಚಾರದಲ್ಲಿ ಹಲವು ಮಾದರಿಯ ಸುಳ್ಳು ಸಾಕ್ಷಿಗಳು, ತಪ್ಪಾದ ಮಾಹಿತಿಗಳಿಂದಲೇ ದೊಡ್ಡಮಟ್ಟದ ಪಿತೂರಿ ನಡೆಸಿದ್ದು ಕಾಣಿಸುತ್ತದೆ. ಆದರೆ, ಹೀಗೆ ಕಟ್ಟಿದ್ದ ಸುಳ್ಳಿನ ಮನೆ, ಕಾರ್ಡ್‌ಹೌಸ್‌ನಂತೆ ಉದುರಿಬಿದ್ದಿದೆ.
ಪಿತೂರಿಯಲ್ಲಿ ಕೈಜೋಡಿಸಿದವರೆಲ್ಲ ಕೋರ್ಟ್ ಕಟಕಟೆಯಲ್ಲಿ ನಿಲ್ಲಬೇಕು. ಅವರೆಲ್ಲರೂ ಕಾನೂನು ಕ್ರಮ ಎದುರಿಸಬೇಕು’ ಎಂದು ಹೇಳಿತ್ತು. ಅದಾದ ಮೇಲೆ ಗುಜರಾತ್ ಪೊಲೀಸರು ತೀಸ್ತಾ ಸೆಟಲ್ವಾಡ್ ಮತ್ತು ಇನ್ನಿಬ್ಬರು ನಿವೃತ್ತ ಐಪಿಎಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಆಗಿನಿಂದಲೂ ತೀಸ್ತಾ ಸೆಟಲ್ವಾಡ್ರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ