ಮುಂಬರುವ ರಾಜಸ್ಥಾನ ವಿಧಾನಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುತ್ತೇವೆ: ಕಾಂಗ್ರೆಸ್

ಶಿಸ್ತು ಕಾಪಾಡದ ಮತ್ತು ಪಕ್ಷದ ವೇದಿಕೆಯ ಹೊರಗೆ ಮಾತನಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದು, ಸಂಪೂರ್ಣ ಒಗ್ಗಟ್ಟಿದ್ದರೆ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಶಿಸ್ತು ಕಾಪಾಡದ ಮತ್ತು ಪಕ್ಷದ ವೇದಿಕೆಯ ಹೊರಗೆ ಮಾತನಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದು, ಸಂಪೂರ್ಣ ಒಗ್ಗಟ್ಟಿದ್ದರೆ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.

ಸೆಪ್ಟೆಂಬರ್ ಮೊದಲ ವಾರದೊಳಗೆ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ನಿರ್ಧರಿಸಲಾಗುವುದು ಮತ್ತು ಅವರ ಆಯ್ಕೆಗೆ ಗೆಲುವು ಮಾತ್ರ ಮಾನದಂಡವಾಗಿದೆ ಎಂದು ಪಕ್ಷ ಹೇಳಿದೆ.

'ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ರಾಜಸ್ಥಾನದಲ್ಲಿ ಚುನಾವಣಾ ಸಿದ್ಧತೆ ಕುರಿತು ಪಕ್ಷದ ಕಾರ್ಯತಂತ್ರದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪೂರ್ಣ ಒಗ್ಗಟ್ಟು ಇದ್ದರೆ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದು. ಇದಕ್ಕೆ ಎಲ್ಲಾ ನಾಯಕರು ಒಪ್ಪಿಕೊಂಡಿದ್ದಾರೆ ಎಂದರು.

ಆದಾಗ್ಯೂ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅವರ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಯಾವುದೇ ಶಾಂತಿ ಸೂತ್ರದ ಬಗ್ಗೆ ಅವರು ಪ್ರತಿಕ್ರಿಯಿಸಲಿಲ್ಲ.

'ನಾವು ಎಂದಿಗೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ. ಆದರೆ, ನಾವು ಒಟ್ಟಾಗಿ ಮತ್ತು ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಹೋರಾಡುತ್ತೇವೆ' ಎಂದು ಮುಂಬರುವ ಚುನಾವಣೆಯಲ್ಲಿ ಪಕ್ಷವು ಯಾರ ನೇತೃತ್ವದಲ್ಲಿ ಸ್ಪರ್ಧಿಸುತ್ತದೆ ಎಂದು ಕೇಳಿದಾಗ ವೇಣುಗೋಪಾಲ್ ಹೇಳಿದರು.

ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜಸ್ಥಾನದ ಎಐಸಿಸಿ ಉಸ್ತುವಾರಿ ಸುಖಜೀಂದರ್ ರಾಂಧವಾ ಮತ್ತು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ದೋತಸ್ರಾ ಉಪಸ್ಥಿತರಿದ್ದರು.

ಇದು ರಾಜಸ್ಥಾನದ ಚುನಾವಣೆ ಬಗ್ಗೆ ಪೂರ್ವಸಿದ್ಧತಾ ಸಭೆಯಾಗಿದ್ದು, ಈ ಸಂದರ್ಭದಲ್ಲಿ ಪಕ್ಷದ ನಾಯಕತ್ವವು ರಾಜ್ಯದಲ್ಲಿ ಚುನಾವಣಾ ನಿರ್ವಹಣೆಯ ಬಗ್ಗೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು. ರಾಜ್ಯ ಸರ್ಕಾರದ ನಾನಾ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯಲು ಎಲ್ಲ ಸಚಿವರು, ಶಾಸಕರು, ಮುಖಂಡರು ಮನೆ ಮನೆಗೆ ತೆರಳಿ ಶುಕ್ರವಾರದಿಂದ ಪಕ್ಷದ ಪ್ರಚಾರ ಆರಂಭಿಸಲಾಗುವುದು ಎಂದು ಘೋಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com