
ಮೀರಠ್: ಉತ್ತರ ಪ್ರದೇಶದಲ್ಲಿ ಧಾರ್ಮಿಕ ಯಾತ್ರೆ ವೇಳೆ ಭೀಕರ ದುರಂತ ಸಂಭವಿಸಿದ್ದು, ಕನ್ವಾರಿಯಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಗೆ ವಿದ್ಯುತ್ ಸ್ಪರ್ಶವಾದ ಕಾರಣ ಐವರು ಯಾತ್ರಿಕರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.
ಉತ್ತರ ಪ್ರದೇಶದ ಮೀರಠ್ ನ ಚೌಹಾನ್ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಕನ್ವಾರಿಯಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್, ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ ಸಂಭವಿಸಿದ ದುರಂತದಲ್ಲಿ ಐದು ಮಂದಿ ಭಕ್ತರು ಸುಟ್ಟು ಕರಕಲಾಗಿದ್ದಾರೆ.
ಹದಿನಾರು ಮಂದಿ ಯಾತ್ರಿಕರ ಗುಂಪು ಹರಿದ್ವಾರದಿಂದ ತಮ್ಮ ಸ್ವಗ್ರಾಮ ರಾಲಿ ಚೌಹಾಣ್ಗೆ ವಾಪಸ್ಸಾಗುತ್ತಿದ್ದಾಗ ಭವಾನ್ಪುರ ಬಳಿ ಈ ದುರಂತ ಸಂಭವಿಸಿದೆ. "ಹತ್ತು ಮಂದಿ ಕನ್ವಾರಿಯಾಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಐದು ಮಂದಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ತನಿಖೆ ನಡೆಯುತ್ತಿದೆ" ಎಂದು ಮೀರಠ್ ಜಿಲ್ಲಾಧಿಕಾರಿ ಡಿ.ಎಂ.ದೀಪಕ್ ಮೀನಾ ಹೇಳಿದ್ದಾರೆ.
ಯಾತ್ರಿಗಳ ವಾಹನದಲ್ಲಿ ಬೃಹತ್ ಸ್ಪೀಕರ್ ಗಳ ಮೂಲಕ ಹಾಡು ಕೇಳುತ್ತಾ ಹಳ್ಳಿಯನ್ನು ಪ್ರವೇಶಿಸಿದಾಗ ವಾಹನಕ್ಕೆ ಅಚಾನಕ್ಕಾಗಿ ತೂಗಾಡುವ ಹೈ-ಟೆನ್ಷನ್ ವೈರ್ ತಗುಲಿದೆ. ಈ ವೇಳೆ ನೋಡನೋಡುತ್ತಲೇ ಒಬ್ಬರ ನಂತರ ಒಬ್ಬರು ಯಾತ್ರಿಕರು ವಿದ್ಯುತ್ ಸ್ಪರ್ಶದಿಂದ ಕುಸಿದು ಬಿದ್ದಿದ್ದಾರೆ. ಗ್ರಾಮಸ್ಥರು ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವಂತೆ ವಿದ್ಯುತ್ ಕೇಂದ್ರಕ್ಕೆ ಕರೆ ಮಾಡಿದ್ದಾರೆಯಾದರೂ ಅವರು ಬಂದು ವಿದ್ಯುತ್ ಕಡಿತ ಮಾಡುವಷ್ಟರಲ್ಲಿಯೇ ಯಾತ್ರಿಕರು ವಿದ್ಯುದಾಘಾತಕ್ಕೆ ತುತ್ತಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಐದು ಮಂದಿ ಸಾವನ್ನಪ್ಪಿದ್ದಾರೆ.
ನಾಲ್ವರು ಗಾಯಗೊಂಡಿದ್ದು, ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ವಿದ್ಯುತ್ ಪ್ರವಹಿಸುತ್ತಿದ್ದ ಹೈಟೆನ್ಷನ್ ಲೈನ್ ಸ್ಪರ್ಶದಿಂದ ಈ ದುರಂತ ಸಂಭವಿಸಿದೆ. ಕನ್ವರ್ ಯಾತ್ರೆಯ ಸಿದ್ಧತೆಯಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ರಾಮ್ ರತನ್ ಸೈನಿ ಹೇಳಿದ್ದಾರೆ.
ಕನ್ವರ್ ಯಾತ್ರೆಯು ಭಾರತದಲ್ಲಿನ ಅತಿ ದೊಡ್ಡ ಧಾರ್ಮಿಕ ಸಭೆಯಾಗಿದ್ದು, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ದೆಹಲಿ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಛತ್ತೀಸ್‌ಗಢ ಒಡಿಶಾ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಿಂದ ಪ್ರತಿ ವರ್ಷ ಅಂದಾಜು 10 ರಿಂದ 12 ಮಿಲಿಯನ್ ಜನರು ಭಾಗವಹಿಸುತ್ತಾರೆ. ಕನ್ವರಿಯಾಸ್ ಎಂದು ಕರೆಯಲ್ಪಡುವ ಯಾತ್ರಿಕರು, ಕೇಸರಿ ವೇಷಭೂಷಣವನ್ನು ಧರಿಸುತ್ತಾರೆ, ಭಕ್ತಿಯ ಪ್ರದರ್ಶನದಲ್ಲಿ ಹೆದ್ದಾರಿಗಳಲ್ಲಿ ವಾಹನಗಳ ಪಕ್ಕದಲ್ಲಿ ಬರಿಗಾಲಿನಲ್ಲಿ ನಡೆಯುತ್ತಾರೆ.
Advertisement