ಪ್ರತಿಪಕ್ಷಗಳ ಒಕ್ಕೂಟಕ್ಕೆ INDIA ಹೆಸರು ಸಲಹೆ ನೀಡಿದ್ಯಾರು?: ಯಾರು ಯಾವೆಲ್ಲಾ ಹೆಸರು ಸೂಚಿಸಿದ್ದರು?... ಇಲ್ಲಿದೆ ವಿವರ

ಈ ವರೆಗೂ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ತೃಣಮೂಲ ಕಾಂಗ್ರೆಸ್, INDIA ಹೆಸರನ್ನು ಸೂಚಿಸಿದ ಕಾಂಗ್ರೆಸ್ ನ್ನು ಅಥವಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬೆಂಬಲಿಸಿ, ಹೆಸರಿಗೆ ಅನುಮೋದನೆ ನೀಡಿದೆ!
ಪ್ರತಿಪಕ್ಷಗಳ ಮೈತ್ರಿಕೂಟ ಸುದ್ದಿಗೋಷ್ಟಿ
ಪ್ರತಿಪಕ್ಷಗಳ ಮೈತ್ರಿಕೂಟ ಸುದ್ದಿಗೋಷ್ಟಿ
Updated on

ಬೆಂಗಳೂರು: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳು INDIA ಹೆಸರಿನ ಮೈತ್ರಿಕೂಟದಲ್ಲಿ ಒಗ್ಗಟ್ಟಾಗಿವೆ. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಪ್ರತಿಪಕ್ಷಗಳ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಲಾಗಿದೆ. ಇದಕ್ಕೂ ಮುನ್ನ ಹೆಸರಿನ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಗಿತ್ತು.

INDIA ಹೆಸರು ಬರುವುದರ ಹಿಂದಿನ ಆಸಕ್ತಿದಾಯಕ ಅಂಶಗಳು, ಕಾರಣಗಳ ವಿವರ ಇಲ್ಲಿದೆ. ಯಾವ ಪಕ್ಷದ ಉಪಸ್ಥಿತಿಯನ್ನು ವಿರೋಧಿಸಿ ಟಿಎಂಸಿ ಈ ವರೆಗೂ ಪ್ರತಿಪಕ್ಷಗಳ ಒಕ್ಕೂಟದಿಂದ ಹಿಂದೆಸರಿಯುತ್ತಿತ್ತೋ ಈಗ ಆ ಪಕ್ಷದ ಜೊತೆಗೂಡಿ INDIA ಎಂಬ ಹೆಸರನ್ನು ಅಂತಿಮಗೊಳಿಸಲು ಸಹಕರಿಸಿರುವುದು ಈ ಬೆಳವಣಿಗೆಗಳ ಕೇಂದ್ರಬಿಂದುವಾಗಿದೆ. 

ಹೌದು ಈ ವರೆಗೂ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ತೃಣಮೂಲ ಕಾಂಗ್ರೆಸ್, INDIA ಹೆಸರನ್ನು ಸೂಚಿಸಿದ ಕಾಂಗ್ರೆಸ್ ನ್ನು ಅಥವಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬೆಂಬಲಿಸಿ, ಹೆಸರಿಗೆ ಅನುಮೋದನೆ ನೀಡಿದೆ!

INDIAದ ಮುಂದಿನ ಸಭೆ ಆಗಸ್ಟ್ ನ ಉತ್ತರಾರ್ಧದಲ್ಲಿ ನಿಗದಿಯಾಗಿದ್ದು ಮೈತ್ರಿಕೂಟಕ್ಕೆ ಹೊಸದಾಗಿ ಪ್ರವೇಶಿಸಿರುವ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಆಗಸ್ಟ್ ಸಭೆಯ ಆತಿಥ್ಯವನ್ನು ವಹಿಸಲಿದೆ.

ಮುಂಬೈ ನಲ್ಲಿ ವಿಪಕ್ಷಗಳ ಮೈತ್ರಿಕೂಟದ ಜಂಟಿ ರ್ಯಾಲಿಯೂ ನಡೆಯಲಿದ್ದು, ಮೈತ್ರಿಕೂಟದ ಸಂಚಾಲಕರೂ ನೇಮಕವಾಗಲಿದ್ದಾರೆ. ಪಾಟ್ನಾದಲ್ಲಿ ನಡೆದ ಸಭೆಯಲ್ಲಿ 16 ಪಕ್ಷಗಳು ಭಾಗಿಯಾಗಿದ್ದರೆ, ಬೆಂಗಳೂರಿನಲ್ಲಿ 26 ಪಕ್ಷಗಳು ಭಾಗಿಯಾಗಿದ್ದವು. 

ಆರಂಭದಲ್ಲಿ INDIA ಹೆಸರಿನ ಬಗ್ಗೆ ಹೆಚ್ಚು ಚರ್ಚೆ, ಮೂಡದ ಒಮ್ಮತ!

INDIA ಎಂಬ ಹೆಸರನ್ನು ಒಂದೇ ಬಾರಿಗೆ ಪ್ರಸ್ತಾವಿಸಿ ಅಂಗೀಕರಿಸಿದ್ದಲ್ಲ. ಬದಲಾಗಿ ಈ ಬಗ್ಗೆ ಹಲವರು ಹಲವಾರು ರೀತಿಯ ಸಲಹೆಗಳನ್ನು ನೀಡಿದ್ದರು ಆ ಸಲಹೆಗಳ ಬಗ್ಗೆ ಚರ್ಚೆ ನಡೆದು ಈ ಹೆಸರು ಅಂತಿಮಗೊಂಡಿದೆ.  ಮೂಲಗಳ ಪ್ರಕಾರ, ರಾಜಕೀಯ ಮೈತ್ರಿಕೂಟವೊಂದಕ್ಕೆ INDIA ಎಂಬ ಹೆಸರನ್ನು ನೀಡಬಹುದೇ? ಎಂಬ ಅನುಮಾನವನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ವ್ಯಕ್ತಪಡಿಸಿದ್ದರು. ಇದಷ್ಟೇ ಅಲ್ಲದೇ ಎಡ ಪಕ್ಷಗಳ ನಾಯಕರಾದ ಸೀತಾರಾಮ್ ಯೆಚೂರಿ, ಡಿ. ರಾಜ, ಜಿ ದೇವರಾಜನ್ ಅವರು INDIA ಎಂಬ ಹೆಸರಿನ ಬಗ್ಗೆ ಸಮಾಧಾನಗೊಳ್ಳದೇ, ಸಭೆಯ ನಡುವೆಯೇ  ಆಂತರಿಕವಾಗಿ ಏನನ್ನೋ ಚರ್ಚೆ ಮಾಡಿದರು ಎಂದು ತಿಳಿದುಬಂದಿದೆ. 

ಈ ಬಳಿಕ ಯೆಚೂರಿ V (ವಿಕ್ಟರಿ) ಫಾರ್ ಇಂಡಿಯಾ ಅಥವಾ We for India ಎಂಬ ಹೆಸರನ್ನು ಸಲಹೆ ನೀಡಿದ್ದರು, ಆದರೆ ಇದು ಪ್ರಚಾರದ ಸ್ಲೋಗನ್ ಮಾದರಿ ಇದೆ ಎಂಬ ಕಾರಣಕ್ಕೆ ಇದನ್ನು ಹಲವು ನಾಯಕರು ಒಪ್ಪಲಿಲ್ಲ.

INDIA ಎಂಬ ಸಂಕ್ಷಿಪ್ತ ರೂಪಕ್ಕೆ ಎಲ್ಲರೂ ಒಪ್ಪಿಗೆ ನೀಡಿದರಾದರೂ  Indian National Developmental Inclusive Alliance ಎಂಬ ಪೂರ್ಣ ಅರ್ಥ ನೀಡುವ ಶಬ್ದಗಳಲ್ಲಿ ಮತ್ತೆ ಕೆಲವು ನಾಯಕರು ಕೆಲವು ಬದಲಾವಣೆಗಳನ್ನು ಸಲಹೆ ನೀಡಿದರು ಎಂದು ತಿಳಿದುಬಂದಿದೆ.

INDIA ಎಂಬ ಹೆಸರನ್ನು ರಾಹುಲ್ ಗಾಂಧಿ ಮೊದಲಿಗೆ ಸಲಹೆ ನೀಡಿದರು, ಆದರೆ ಕೆಸಿ ವೇಣುಗೋಪಾಲ್ ಇದಕ್ಕೆ ಮಮತಾ ಬ್ಯಾನರ್ಜಿ ಮೂಲಕ ಒಪ್ಪಿಗೆ ಪಡೆಯಲು ಇಚ್ಛಿಸಿದರು. ಮಮತಾ ಬ್ಯಾನರ್ಜಿ ಸಂಕ್ಷಿಪ್ತ ರೂಪಕ್ಕೆ ಒಪ್ಪಿಗೆ ನೀಡಿದರಾದರೂ ಎನ್ ಜಾಗದಲ್ಲಿ ನ್ಯಾಷನಲ್ ಎಂಬ ಶಬ್ದದ ಬದಲಿಗೆ ನ್ಯೂ ಎಂಬ ಶಬ್ದವನ್ನು ಸಲಹೆ ನೀಡಿದರು ಎನ್ನಲಾಗಿದೆ.

ಇನ್ನು ಮತ್ತೊಂದು ಮೂಲಗಳ ಪ್ರಕಾರ, ಮೈತ್ರಿಕೂಟಕ್ಕೆ ಹೆಸರು ನೀಡುವುದಕ್ಕಿಂತಲೂ ಸ್ಥಾನಗಳ ಹಂಚಿಕೆ ಬಹಳ ಮುಖ್ಯವಾದದ್ದು ಎಂಬ ಅಭಿಪ್ರಾಯವನ್ನು ಬಲವಾಗಿ ಪ್ರತಿಪಾದಿಸಿದರು ಇದಕ್ಕೆ ಯೆಚೂರಿ ಸಹ ಸಹಮತ ಸೂಚಿಸಿದರು ಎನ್ನಲಾಗಿದೆ. ಕೇರಳ, ಪಶ್ಚಿಮ ಬಂಗಾಳಗಳಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸಾಂಪ್ರದಾಯಿಕ ವಿಪಕ್ಷಗಳಾಗಿರುವ ಹಿನ್ನೆಲೆಯಲ್ಲಿ ಸ್ಥಾನ ಹಂಚಿಕೆಯೇ ಮುಖ್ಯ ವಿಷಯ ಎಂದು ಯೆಚೂರಿ ಅಭಿಪ್ರಾಯಪಟ್ಟಿದ್ದು ಕಾಂಗ್ರೆಸ್ ಎಷ್ಟು ಬಿಟ್ಟುಕೊಡಲು ಸಿದ್ಧ ಎಂದು ಪ್ರಶ್ನಿಸಿದ್ದಾರೆ.

ಇನ್ನು INDIA ದಲ್ಲಿ ಡಿ ಎನ್ನುವ ಶಬ್ದ ಡೆಮಾಕ್ರೆಟಿಕ್ ಎಂಬುದನ್ನು ಸೂಚಿಸಬೇಕೋ ಅಥವಾ ಡೆವಲ್ಮೆಂಟಲ್ ಎಂಬುದನ್ನು ಸೂಚಿಸಬೇಕೋ ಎಂಬುದರ ಬಗ್ಗೆಯೇ ವಿಸ್ತೃತ ಚರ್ಚೆ ನಡೆಯಿತು.

ಮೋದಿ ವಿರುದ್ಧ INDIA  ಎನ್ ಡಿಎ ವಿರುದ್ಧ ಇಂಡಿಯಾ ಎಂಬುದು ಪ್ರಚಾರದ ವೇಳೆ ಬಹಳ ಸುಲಭವಾಗಿ ಜನರನ್ನು ತಲುಪುತ್ತದೆ ಆದ್ದರಿಂದ ಇದೇ ಹೆಸರು ಸೂಕ್ತ ಎಂದು ಮೈತ್ರಿಕೂಟದ ಸದಸ್ಯರಿಗೆ ಮನವರಿಕೆ ಮಾಡಿಕೊಡುವಲ್ಲಿ ರಾಹುಲ್ ಗಾಂಧಿ ಯಶಸ್ವಿಯಾಗಿದ್ದು ಈ ಹೆಸರು ಅಂತಿಮಗೊಂಡಿದೆ.

ಯೆಚೂರಿ ಮಾತಿಗೆ ದೀದಿ ಕೆಂಡಾಮಂಡಲ

ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್- ಮಮತಾ ಬ್ಯಾನರ್ಜಿ ಸಹಕಾರದ ಬಗ್ಗೆ ಎಡಪಕ್ಷಗಳಿಗೆ ಸಮಾಧಾನವಿರಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಸೋಮವಾರದ ಸಭೆಯಲ್ಲಿ ಮಾತನಾಡಿದ್ದ ಯೆಚೂರಿ, ಎಡಪಕ್ಷಗಳು ಹಾಗೂ ಕಾಂಗ್ರೆಸ್ ಜೊತೆಯಲ್ಲಿ ಸೆಕ್ಯುಲರ್ ಪಕ್ಷಗಳು, ಬಂಗಾಳದಲ್ಲಿ ಟಿಎಂಸಿ ಸಹ ಬಿಜೆಪಿ ವಿರುದ್ಧ ಸೆಣೆಸಲಿದೆ ಎಂದು ಹೇಳಿದ್ದಕ್ಕೆ ಮಮತಾ ಬ್ಯಾನರ್ಜಿ ಕೆಂಡಾಮಂಡಲರಾಗಿದ್ದರು ಕೊನೆಗೆ ಲಾಲೂ ಪ್ರಸಾದ್ ಯಾದವ್ ಇಂತಹ ಹೇಳಿಕೆಗಳಿಂದ ದೂರ ಇರಬೇಕು ಯೆಚೂರಿಗೆ ಸಲಹೆ ನೀಡಿದ ಪ್ರಸಂಗವೂ ನಡೆದಿದೆ.

ಇನ್ನು ಪಂಜಾಬ್ ಸಿಎಂ ಭಗವಂತ್ ಮಾನ್ ಕಾಂಗ್ರೆಸ್ ವಿರುದ್ಧ ಮಾತನಾಡಿದ್ದರು ಇದರ ಬಗ್ಗೆಯೂ ಲಾಲು ಪ್ರಸಾದ್ ಯಾದವ್ ಅಸಮಾಧಾನಗೊಂಡಿದ್ದರು. ಟಿಎಂಸಿ ವಿರುದ್ಧ ಮಾತನಾಡುತ್ತಿದ್ದ ನಾಯಕರಿಗೂ ನಿಯಂತ್ರಣ ಹಾಕಿಕೊಳ್ಳುವಂತೆ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com