
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಒಂದಾಗಿರುವ ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯನ್ ನ್ಯಾಷನಲ್ ಡೆವಲಪ್ ಮೆಂಟಲ್ ಇನ್ಕ್ಲೂಸಿವ್ ಅಲೈನ್ಸ್(INDIA) ಎಂದು ನಾಮಕರಣ ಮಾಡಲಾಗಿದ್ದು, ನೀವು 'ಇಂಡಿಯಾ'ಗೆ ಸವಾಲು ಹಾಕುತ್ತೀರಾ? ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಮಂಗಳವಾರ ಗುಡುಗಿದ್ದಾರೆ.
ಇಂದು ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಎನ್‌ಡಿಎ, ನೀವು INDIAಗೆ ಸವಾಲು ಹಾಕುತ್ತೀರಾ? ಬಿಜೆಪಿ, ಇಂಡಿಯಾಗೆ ಸವಾಲು ಹಾಕಬಹುದೇ? ಇತರರು INDIAಗೆ ಸವಾಲು ಹಾಕಬಹುದೇ? ನಾವು ನಮ್ಮ ಮಾತೃಭೂಮಿಯನ್ನು ಪ್ರೀತಿಸುತ್ತೇವೆ. ನಾವು ಈ ದೇಶದ ದೇಶಭಕ್ತರು. ನಾವು ಯುವಕರಿಗಾಗಿ, ರೈತರಿಗಾಗಿ, ನಾವು ದಲಿತರಿಗಾಗಿ, ಉತ್ತಮ ಆರ್ಥಿಕತೆಗಾಗಿ, ದೇಶಕ್ಕಾಗಿ ನಾವು ಒಗ್ಗಟ್ಟಾಗಿದ್ದೇವೆ" ಎಂದರು.
ಎನ್ಡಿಎಗೆ ಅಸ್ತಿತ್ವವೇ ಇಲ್ಲ. ಸರ್ಕಾರವನ್ನು ಖರೀದಿ ಮಾಡುವುದೇ ಅದರ ಕೆಲಸ. ಅದಕ್ಕೆ ಉದಾಹರಣೆ ಮಣಿಪುರ ಇರಬಹುದು, ಉತ್ತರ ಪ್ರದೇಶ ಇರಬಹುದು, ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಅದನ್ನು ನೋಡಿರಬಹುದು. ಸರ್ಕಾರವನ್ನು ಬೀಳಿಸುವುದು, ಸರ್ಕಾರ ಖರೀದಿ ಮಾಡುವುದು ಬಿಜೆಪಿಯವರ ಕೆಲಸವಾಗಿದೆ. ಅಧಿಕಾರ ದುರ್ಬಳಕೆ ಮಾಡಿ ಪ್ರಜಾಪ್ರಭುತ್ವವನ್ನು ಖರೀದಿಸುತ್ತಿದೆ ಎಂದು ಬಿಜೆಪಿ ವಿರುದ್ಧ ದೀದಿ ವಾಗ್ದಾಳಿ ನಡೆಸಿದರು.
ನಾವು ನಮ್ಮ ತಾಯಿ ನಾಡನ್ನು ಪ್ರೀತಿಸುತ್ತೇವೆ. ನಾವು ಜನರಿಗಾಗಿ ದೇಶಕ್ಕಾಗಿ ಕೆಲಸ ಮಾಡುತ್ತೇವೆ. ಮುಂದಿನ ನಮ್ಮ ಎಲ್ಲಾ ಹೋರಾಟ ಇಂಡಿಯಾ ಹೆಸರಿನಲ್ಲಿ ನಡೆಯಲಿದೆ. ಸಾಧ್ಯವಾದ್ರೆ ನಮ್ಮನ್ನು ಎದುರಿಸಿ ಎಂದು ಎನ್‌ಡಿಎ ಮೈತ್ರಿಕೂಟಕ್ಕೆ ಟಿಎಂಸಿ ಮುಖ್ಯಸ್ಥೆ ಸವಾಲು ಹಾಕಿದ್ದಾರೆ.
Advertisement