ಮರಳು ಗಣಿಗಾರಿಕೆ ಪ್ರಕರಣ: ಇಡಿಯಿಂದ ತಮಿಳುನಾಡು ಸಚಿವ ಪೊನ್ಮುಡಿಯ 41.9 ಕೋಟಿ ರೂ. FD ಜಪ್ತಿ
ಚೆನ್ನೈ: ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಅವರ ನಿವಾಸದ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ(ಇಡಿ), ಶೋಧದ ವೇಳೆ ಪತ್ತೆಯಾದ 41.9 ಕೋಟಿ ಮೌಲ್ಯದ ಸ್ಥಿರ ಠೇವಣಿ(ಎಫ್ ಡಿ )ಯನ್ನು ಜಪ್ತಿ ಮಾಡಿದೆ.
ಕೆಂಪು ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪೊನ್ಮುಡಿ ಮತ್ತು ಅವರ ಪುತ್ರ ಗೌತಮ್ ಸಿಗಮಣಿಗೆ ಸಂಬಂಧಿಸಿದ ಏಳು ಸ್ಥಳಗಳಲ್ಲಿ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಪರಿಶೀಲನೆ ವೇಳೆ 81.7 ಲಕ್ಷ ರೂಪಾಯಿ ನಗದು ಮತ್ತು 13 ಲಕ್ಷ ರೂಪಾಯಿ ವಿದೇಶಿ ಕರೆನ್ಸಿ ವಶಪಡಿಸಿಕೊಂಡಿದೆ.
2006 ಮತ್ತು 2011ರಲ್ಲಿ ಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದಾಗ ಗಣಿ ಸಚಿವರಾಗಿದ್ದಾಗ ಪೊನ್ಮುಡಿ ಅವರು ಐದು ಸ್ಥಳಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆಗೆ ಪರವಾನಗಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಪೊನ್ಮುಡಿ ಅವರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆಗೆ ಅನುಮತಿ ನೀಡಿ ರಾಜ್ಯದ ಬೊಕ್ಕಸಕ್ಕೆ 28 ಕೋಟಿ ರೂ. ನಷ್ಟ ಮಾಡಿದ್ದಾರೆಂದು ಎಂದು ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರು. ಇದೇ ಪ್ರಕರಣ ಸಂಬಂಧ ಈಗ ಇ.ಡಿ ತನಿಖೆ ನಡೆಸುತ್ತಿದೆ.
ನಿನ್ನೆಯಿಂದ ಸುಮಾರು 20 ಗಂಟೆಗಳ ಕಾಲ ಪೊನ್ಮುಡಿ ಅವರನ್ನು ವಿಚಾರಣೆ ನಡೆಸಿರುವ ಇಡಿ,
ಇಂದು ಬೆಳಗಿನ ಜಾವ 3.30ಕ್ಕೆ ಬಿಟ್ಟು ಕಳುಹಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಮತ್ತೆ ಹಾಜರಾಗುವಂತೆ ಸೂಚಿಸಲಾಗಿದೆ.

