ರಾಜ್ಯಸಭೆ: ಮುಂಗಾರು ಅಧಿವೇಶನದ ಉಳಿದ ಅವಧಿಗೆ ಎಎಪಿಯ ಸಂಜಯ್ ಸಿಂಗ್ ಅಮಾನತು

'ಅಶಿಸ್ತಿನ ವರ್ತನೆಗಾಗಿ' ಮುಂಗಾರು ಅಧಿವೇಶನದ ಉಳಿದ ಅವಧಿಗೆ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರನ್ನು ರಾಜ್ಯಸಭೆಯಿಂದ ಸೋಮವಾರ ಅಮಾನತುಗೊಳಿಸಲಾಗಿದೆ. ಸದನದ ನಾಯಕ ಪಿಯೂಷ್ ಗೋಯಲ್ ಅವರು ಸಂಜಯ್ ಸಿಂಗ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾಪವನ್ನು ಮಂಡಿಸಿದರು. 
ಸಂಜಯ್ ಸಿಂಗ್
ಸಂಜಯ್ ಸಿಂಗ್
Updated on

ನವದೆಹಲಿ: 'ಅಶಿಸ್ತಿನ ವರ್ತನೆಗಾಗಿ' ಮುಂಗಾರು ಅಧಿವೇಶನದ ಉಳಿದ ಅವಧಿಗೆ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರನ್ನು ರಾಜ್ಯಸಭೆಯಿಂದ ಸೋಮವಾರ ಅಮಾನತುಗೊಳಿಸಲಾಗಿದೆ.

ಸದನದ ನಾಯಕ ಪಿಯೂಷ್ ಗೋಯಲ್ ಅವರು ಸಂಜಯ್ ಸಿಂಗ್ ಅವರನ್ನು ಅಮಾನತುಗೊಳಿಸುವ ನಿರ್ಣಯವನ್ನು ಮಂಡಿಸಿದರು. ಇದನ್ನು ಸದನವು ಧ್ವನಿ ಮತದ ಮೂಲಕ ಅಂಗೀಕರಿಸಿತು.

ನಿರ್ಣಯ ಮಂಡಿಸುವ ಮೊದಲು, ಸಭಾಪತಿ ಜಗದೀಪ್ ಧಂಖರ್ ಅವರು ಅಶಿಸ್ತಿನ ನಡವಳಿಕೆಗಾಗಿ ಸಂಜಯ್ ಸಿಂಗ್ ಅವರನ್ನು ಹೆಸರಿಸಿದರು ಮತ್ತು ಅವರಿಗೆ ಎಚ್ಚರಿಕೆ ನೀಡಿದರು.

ಸಿಂಗ್ ಅವರನ್ನು ಅಮಾನತುಗೊಳಿಸಿದ ಕೂಡಲೇ, ವಿಪಕ್ಷಗಳ ಸದಸ್ಯರು ಸದನದಲ್ಲಿ ಗದ್ದಲವನ್ನು ಮುಂದುವರೆಸಿದ್ದರಿಂದ, ರಾಜ್ಯಸಭೆ ಅಧ್ಯಕ್ಷರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಇದಕ್ಕೂ ಮುನ್ನ, ಮಧ್ಯಾಹ್ನ 12 ಗಂಟೆಗೆ ಸದನದ ಕಲಾಪ ಆರಂಭಗೊಂಡಾಗ ವಿರೋಧ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಮಣಿಪುರದ ಕುರಿತು ಸದನದಲ್ಲಿ ಪ್ರಧಾನಿ ಹೇಳಿಕೆ ನೀಡುವಂತೆ ಒತ್ತಾಯಿಸಿದರು.

ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಸುವುದಾಗಿ ಸಭಾಪತಿ ಘೋಷಿಸಿದರು. ಪ್ರಶ್ನೋತ್ತರ ಅವಧಿಯು ಗದ್ದಲದ ನಡುವೆಯೇ ಕೆಲವು ನಿಮಿಷಗಳ ಕಾಲ ಮುಂದುವರೆಯಿತು. ಈ ವೇಳೆ ಸದನದ ಬಾವಿಗಿಳಿದ ಸಂಜಯ್ ಸಿಂಗ್, ಸಭಾಪತಿಗಳೊಂದಿಗೆ ವಾಗ್ವಾದಕ್ಕಿಳಿದರು.

ಮೊದಲಿಗೆ ಅವರನ್ನು ಅವರ ಆಸನಕ್ಕೆ ಹಿಂತಿರುಗುವಂತೆ ಕೇಳಲಾಯಿತು. ಆದರೆ, ಅವರು ಅದನ್ನು ಕೇಳದಿದ್ದಾಗ, ನೀವು ಪದೇ ಪದೆ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದೀರಿ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಸದನದ ಸಮಯವನ್ನು ಹಾಳು ಮಾಡುತ್ತಿದ್ದೀರಿ. ನೀವು ಇದೇ ರೀತಿ ಪದೇ ಪದೇ ವರ್ತಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಧಂಖರ್ ಎಚ್ಚರಿಕೆ ನೀಡಿದರು. 

ಕೂಡಲೇ, ಗೋಯಲ್ ಅವರು ಎದ್ದುನಿಂತು ಸಿಂಗ್ ಅವರನ್ನು ಅಮಾನತುಗೊಳಿಸುವ ನಿರ್ಣಯವನ್ನು ಮಂಡಿಸಲು ಬಯಸುವುದಾಗಿ ಹೇಳಿದರು.

'ಈ ರೀತಿಯ ನಡವಳಿಕೆ ಮತ್ತು ಸದನವನ್ನು ಗೊಂದಲಗೊಳಿಸುವುದು ಸದನದ ನೈತಿಕತೆ ಮತ್ತು ನಿಯಮಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಸರ್ಕಾರವು ಸಂಜಯ್ ಸಿಂಗ್ ಅವರನ್ನು ಅಮಾನತುಗೊಳಿಸುವ ನಿರ್ಣಯವನ್ನು ಮಂಡಿಸಲು ಬಯಸಿದೆ ಎಂದ ಗೋಯಲ್, ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭಾಪತಿಗಳನ್ನು ಒತ್ತಾಯಿಸಿದರು.

ಪೀಠವು ಗೋಯಲ್‌ಗೆ ಅಮಾನತು ನಿರ್ಣಯವನ್ನು ಮಂಡಿಸಲು ಅವಕಾಶ ನೀಡಿತು. ಸದನವು ಕೈ ಎತ್ತುವ ಮೂಲಕ ಮತ್ತು ಧ್ವನಿ ಮತದ ಮೂಲಕ ನಿರ್ಣಯವನ್ನು ಅಂಗೀಕರಿಸಿತು. ನಂತರ, ಸಭಾಪತಿ ಧಂಖರ್, 'ಸಭಾಪತಿಯ ನಿರ್ದೇಶನಗಳನ್ನು ಪದೇ ಪದೆ ಉಲ್ಲಂಘಿಸಿದ ಸಂಜಯ್ ಸಿಂಗ್ ಅವರನ್ನು ಈ ಅಧಿವೇಶನದ ಸಂಪೂರ್ಣ ಅವಧಿಗೆ ಅಮಾನತುಗೊಳಿಸಲಾಗಿದೆ' ಎಂದು ಹೇಳಿದರು.

ಸದನವನ್ನು ಮುಂದೂಡಿದ ಕೂಡಲೇ, ಗೋಯಲ್ ಸಭಾಪತಿಯವರ ಕೊಠಡಿಗೆ ಹೋದರು ಮತ್ತು ಅನೇಕ ವಿರೋಧ ಪಕ್ಷಗಳ ನಾಯಕರು ಅವರನ್ನು ಹಿಂಬಾಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com