

ಚೆನ್ನೈ: ಮದ್ರಾಸ್ ವರದಿಗಾರರ ಗಿಲ್ಡ್ ಪತ್ರಕರ್ತ- ಪ್ರಕಾಶಕ ಬದ್ರಿ ಶೇಷಾದ್ರಿ ಬಂಧನವನ್ನು ಖಂಡಿಸಿದ್ದು, ಆತನ ಬಿಡುಗಡೆಗೆ ಆಗ್ರಹಿಸಿದೆ. ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬದ್ರಿ ಶೇಷಾದ್ರಿ ಹೇಳಿಕೆಯನ್ನು ಅವಹೇಳನಕಾರಿ ಎಂದು ಆರೋಪಿಸಲಾಗಿದೆ.
ತಕ್ಷಣವೇ ಬದ್ರಿ ಶೇಷಾದ್ರಿ ಅವರನ್ನು ಬಿಡುಗಡೆ ಮಾಡಬೇಕೆಂದು ವರದಿಗಾರರ ಗಿಲ್ಡ್ ಸರ್ಕಾರವನ್ನು ಆಗ್ರಹಿಸಿದೆ. ಶೇಷಾದ್ರಿ ಅವರು ನೀಡಿರುವ ಹೇಳಿಕೆ ಎಷ್ಟೇ ಅವಹೇಳನಕಾರಿಯಾಗಿದ್ದರೂ ಅವರನ್ನು ಬಂಧಿಸುವ ಅಗತ್ಯವಿಲ್ಲ, ಸರ್ಕಾರಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ತನ್ನ ಕೆಲಸವನ್ನು ಮಾಡಲು ಬಿಡುವ ಅವಕಾಶ ಇದ್ದೇ ಇದೆ. ಆದರೆ ಬಂಧನಕ್ಕೊಳಪಡಿಸಿರುವುದು ಸರಿಯಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ, ನಾಗರಿಕ ಸ್ವಾತಂತ್ರ್ಯಗಳ ವಿರೋಧಿ ನಡೆಯಾಗಿದೆ ಎಂದು ವರದಿಗಾರರ ಗಿಲ್ಡ್ ಆರೋಪಿಸಿದೆ.
"ಮುಖ್ಯವಾಹಿನಿಯ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಕಾಮೆಂಟ್ಗಳಿಗಾಗಿ ವ್ಯಕ್ತಿಗಳನ್ನು ನೇರವಾಗಿ ಬಂಧಿಸುವುದು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮತ್ತು ಬಿಜೆಪಿಯೇತರ ಸರ್ಕಾರಗಳು ಸೇರಿದಂತೆ ದೇಶದಾದ್ಯಂತದ ಸರ್ಕಾರಗಳ ಕಾರ್ಯತಂತ್ರವಾಗುತ್ತಿವೆ. ಕಾನೂನು ಕ್ರಮವನ್ನು ತೆಗೆದುಕೊಳ್ಳುವ ಬದಲು ಈ ರೀತಿಯ ಕ್ರಮಗಳು ಆತಂಕ ಮೂಡಿಸುತ್ತವೆ ಎಂದು ಗಿಲ್ಡ್ ಹೇಳಿದೆ.