ಖ್ಯಾತ ಪ್ರಕಾಶಕ, ರಾಜಕೀಯ ವಿಶ್ಲೇಷಕ ಬದ್ರಿ ಶೇಷಾದ್ರಿ ಬಂಧನ, ತಮಿಳುನಾಡು ಸರ್ಕಾರದ ವಿರುದ್ಧ ಅಣ್ಣಾಮಲೈ ಕಿಡಿ

ಖ್ಯಾತ ಪ್ರಕಾಶಕ, ರಾಜಕೀಯ ವಿಶ್ಲೇಷಕ ಬದ್ರಿ ಶೇಷಾದ್ರಿ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದು, ಡಿಎಂಕೆ ಸರ್ಕಾರದ ಈ ನಡೆಯನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತೀವ್ರವಾಗಿ ಖಂಡಿಸಿದ್ದಾರೆ.
ಪ್ರಕಾಶಕ ಬದ್ರಿ ಶೇಷಾದ್ರಿ ಬಂಧನ, ಅಣ್ಣಾಮಲೈ ಕಿಡಿ
ಪ್ರಕಾಶಕ ಬದ್ರಿ ಶೇಷಾದ್ರಿ ಬಂಧನ, ಅಣ್ಣಾಮಲೈ ಕಿಡಿ

ಚೆನ್ನೈ: ಖ್ಯಾತ ಪ್ರಕಾಶಕ, ರಾಜಕೀಯ ವಿಶ್ಲೇಷಕ ಬದ್ರಿ ಶೇಷಾದ್ರಿ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದು, ಡಿಎಂಕೆ ಸರ್ಕಾರದ ಈ ನಡೆಯನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತೀವ್ರವಾಗಿ ಖಂಡಿಸಿದ್ದಾರೆ.

ಕಳೆದ ವಾರ ಜುಲೈ 22 ರಂದು ಅವರು ಅಧಾನ್ ತಮಿಳು ಯೂಟ್ಯೂಬ್‌ಗೆ ನೀಡಿದ ಸಂದರ್ಶನದ ಮೇಲೆ ಇಂದು ಬದ್ರಿ ಶೇಷಾದ್ರಿ ಅವರ ಬಂಧನವಾಗಿದೆ. ಕಾರ್ಯಕ್ರಮದಲ್ಲಿ ಅವರು ಮಣಿಪುರ ಹಿಂಸಾಚಾರ, ಕುಕಿಗಳು, ಮೇಟಿಗಳು, ನಾಗಾಗಳು ಮತ್ತು ಮಣಿಪುರ ಹಿಂಸಾಚಾರದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ಪಾತ್ರಗಳ ಬಗ್ಗೆ ಮಾತನಾಡಿದ್ದರು. ಪೆರಂಬಲೂರು ಜಿಲ್ಲೆಯ ಕುನ್ನಂ ನಿವಾಸಿ, ವಕೀಲ ಕವಿಯರಸು ನೀಡಿದ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ. ಸಂದರ್ಶನದ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಬದರಿ ಅವರು ಮಾತನಾಡಿರುವ ರೀತಿ ಬೇಸರ ತಂದಿದೆ ಎಂದು ಕವಿಯರಸು ದೂರಿನಲ್ಲಿ ತಿಳಿಸಿದ್ದಾರೆ.

ಸಂದರ್ಶನದಲ್ಲಿ, ಬದ್ರಿ ಮಣಿಪುರದಲ್ಲಿ ಎಲ್ಲಾ ಸಮಸ್ಯೆಗಳು ಪ್ರಾರಂಭವಾಯಿತು ಏಕೆಂದರೆ ಮಣಿಪುರ ಹೈಕೋರ್ಟಿನ ಪರಿಶಿಷ್ಟ ಪಂಗಡದ ಸ್ಥಾನಮಾನದ ಬಗ್ಗೆ ಮೀಟಿ ಸಮುದಾಯಕ್ಕೆ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಸಿಜೆಐ ಡಿವೈ ಚಂದ್ರಚೂಡ್ ಅವರ ಬಗ್ಗೆ ಮಾತನಾಡಿ, ಸುಪ್ರೀಂ ಕೋರ್ಟ್‌ನ ನಿಲುವನ್ನು ಟೀಕಿಸಿದ್ದರು ಮತ್ತು ಸಿಜೆಐ ಕೈಯಲ್ಲಿ ಬಂದೂಕನ್ನು ಇಡಬಹುದೇ ಮತ್ತು ಅವರು ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದ್ದರು. ಬದ್ರಿ ಸಿಜೆಐ ಸ್ಥಾನವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ, ಅವರು ಸುಪ್ರೀಂ ಕೋರ್ಟ್ ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯ ಗೌರವವನ್ನು ಸಹ ಕೆಡಿಸಿದ್ದಾರೆ ಎಂದು ಕವಿಯರಸು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಸೆಕ್ಷನ್ 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು), 153 ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಮತ್ತು ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು ಮತ್ತು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ತಮಿಳುನಾಡು ಸರ್ಕಾರದ ವಿರುದ್ಧ ಅಣ್ಣಾಮಲೈ ಕಿಡಿ
ಬದ್ರಿ ಶೇಷಾದ್ರಿ ಅವರನ್ನು ಬಂಧಿಸಿರುವ ವಿಚಾರವಾಗಿ ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಅಣ್ಣಾಮಲೈ ವಾಗ್ದಾಳಿ ನಡೆಸಿದ್ದು, ಭ್ರಷ್ಟ ಡಿಎಂಕೆ ಸರ್ಕಾರದ ಸೇಡಿನ ಕ್ರಮ ಜಾರಿಗೊಳಿಸುವುದಷ್ಟೇ ತಮಿಳುನಾಡು ಪೊಲೀಸರ ಕೆಲಸವೇ ಎಂದು ಪ್ರಶ್ನಿಸಿದ್ದಾರೆ. ಅವರ ನೇತೃತ್ವದಲ್ಲಿ ಆರಂಭವಾಗಿರುವ ‘ಎನ್ ಮಣ್ಣ್ ಎನ್ ಮಕ್ಕಳ್’ (En Mann En Makkal) ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ರಾಮೇಶ್ವರಂನಲ್ಲಿ ಚಾಲನೆ ನೀಡಿದ್ದರು. ಯಾತ್ರೆ ಪ್ರಗತಿಯಲ್ಲಿದ್ದು, ಇದೇ ವೇಳೆ, ತಮಿಳುನಾಡು ಸರ್ಕಾರದ ರಾಜಕೀಯ ಕ್ರಮಗಳ ವಿರುದ್ಧ ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.

'ಶೇಷಾದ್ರಿ ಅವರನ್ನು ಇಂದು ಬೆಳಗ್ಗೆ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಇದನ್ನು ತಮಿಳುನಾಡು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಈ ಭ್ರಷ್ಟ ಡಿಎಂಕೆ ಸರ್ಕಾರವು ಸಾಮಾನ್ಯ ಜನರ ಅಭಿಪ್ರಾಯಗಳನ್ನು ಹತ್ತಿಕ್ಕಲು ಬಂಧನಕ್ಕೆ ಆದೇಶ ನೀಡುತ್ತಿದೆ. ಭ್ರಷ್ಟ ಡಿಎಂಕೆ ಸರ್ಕಾರದ ಸೇಡಿನ ಕ್ರಮಗಳನ್ನು ಜಾರಿಗೊಳಿಸುವುದು ಮಾತ್ರ ತಮಿಳುನಾಡು ಪೊಲೀಸರ ಕೆಲಸವೇ?' ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com