ಭ್ರಷ್ಟಾಚಾರ ಪ್ರಕರಣ: ಡಿಕೆಶಿ ವಿರುದ್ಧದ ತನಿಖೆಗೆ ತಡೆ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ 'ಸುಪ್ರೀಂ'

ಆದಾಯ ಮೀರಿ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿರುವ ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. 
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ನವದೆಹಲಿ: ಆದಾಯ ಮೀರಿ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿರುವ ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. 

ನ್ಯಾಯಮೂರ್ತಿ ಬಿಆರ್ ಗವಾಯಿ, ನ್ಯಾಯಮೂರ್ತಿ ಸಿಟಿ ರವಿಕುಮಾರ್ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು, ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಫೆಬ್ರುವರಿ 10 ರಂದು ನೀಡಿದ್ದ ಆದೇಶದ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಮಾತನಾಡಿ, ಸಂಸ್ಥೆಯ ಪರವಾಗಿ ಆದೇಶವಿದ್ದರೂ, ಹೈಕೋರ್ಟ್‌ನ ವಿಭಾಗೀಯ ಪೀಠವು ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ ಎಂದರು.

ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಸಿಬಿಐ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದೆ. ಆದರೆ, ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ ಮಧ್ಯಂತರ ಆದೇಶಗಳನ್ನು ಪ್ರಶ್ನಿಸಲು ನಿರಾಕರಿಸಿದೆ ಎಂದು ಹೇಳಿದರು.

ಆಗ ಸುಪ್ರೀಂ ಕೋರ್ಟ್ ಪೀಠವು, ಈ ವಿಚಾರದಲ್ಲಿ ತಾನು ಮಧ್ಯಪ್ರವೇಶಿಸಲು ಹೋಗುವುದಿಲ್ಲ ಎಂದಿತು ಮತ್ತು ತನ್ನ ಮುಂದಿರುವ ಪ್ರಕರಣವನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ಮನವಿ ಮಾಡಲು ಸಿಬಿಐಗೆ ಅವಕಾಶ ನೀಡಿತು. 

ಫೆಬ್ರುವರಿ 10 ರಂದು ಕರ್ನಾಟಕ ಹೈಕೋರ್ಟ್ ಡಿಕೆ ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ.

ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಕ್ರಮ ಕೈಗೊಂಡಿರುವ ವರದಿಯನ್ನು ಸಲ್ಲಿಸುವಂತೆ ತನಿಖಾ ಸಂಸ್ಥೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೆ, ಶಿವಕುಮಾರ್ ವಿರುದ್ಧ ದಾಖಲಾಗಿರುವ ಪ್ರಕರಣಗಳು 2020ರದ್ದಾಗಿವೆ ಎಂದು ಸೂಚಿಸಿದ ಹೈಕೋರ್ಟ್, ಕಳೆದ ಎರಡು ವರ್ಷಗಳ ತನಿಖೆಯ ಪ್ರಗತಿ ಕುರಿತು ಸಿಬಿಐ ಅನ್ನು ಪ್ರಶ್ನಿಸಿದೆ.

ಅಂತಿಮ ವರದಿಯನ್ನು ಯಾವಾಗ ಸಲ್ಲಿಸುತ್ತೀರಿ ಎಂದು ಹೈಕೋರ್ಟ್ ತನಿಖಾ ಸಂಸ್ಥೆಯನ್ನು ಕೇಳಿದ್ದು, ಮುಂದಿನ ವಿಚಾರಣೆವರೆಗೆ ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣದ ಸಿಬಿಐ ವಿಚಾರಣೆಗೆ ತಡೆ ನೀಡಿ ಪ್ರಕರಣವನ್ನು ಮುಂದೂಡಿದೆ.

ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆ 2017ರಲ್ಲಿ ದಾಳಿ ನಡೆಸಿತ್ತು. ಐಟಿ ಇಲಾಖೆ ನೀಡಿದ ಮಾಹಿತಿಯನ್ನು ಆದರಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ಶಿವಕುಮಾರ್ ವಿರುದ್ಧ ತನಿಖೆ ಆರಂಭಿಸಿದೆ.

ಇ.ಡಿ ತನಿಖೆಯನ್ನು ಆಧರಿಸಿ, ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿಬಿಐ ರಾಜ್ಯ ಸರ್ಕಾರದ ಅನುಮತಿ ಕೋರಿತ್ತು. ಈ ಸಂಬಂಧ ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರ 2019ರ ಸೆಪ್ಟೆಂಬರ್ 25ರಂದು ಅಧಿಸೂಚನೆ ಹೊರಡಿಸಿತ್ತು ಮತ್ತು 2020ರ ಅಕ್ಟೋಬರ್ 3ರಂದು ಸಿಬಿಐ ಎಫ್ಐಆರ್ ದಾಖಲಿಸಿತ್ತು.

ಬಳಿಕ ಎಫ್ಐಆರ್ ಅನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ಅವರ ಅರ್ಜಿಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಡಿಕೆ ಶಿವಕುಮಾರ್ ಅವರ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್, ಅವರ ವಿರುದ್ಧದ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿತ್ತು. ಬಳಿಕ ಇದೇ ತಿಂಗಳು 17 ರಂದು ಅದನ್ನು ಮೂರು ವಾರಗಳ ಕಾಲ ವಿಸ್ತರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com