ಸಿಗರೇಟ್ ಸೇದಬೇಡ ಎಂದಿದ್ದಕ್ಕೇ ವ್ಯಕ್ತಿಗೆ 9 ಬಾರಿ ಇರಿದ 'ಯುವಕ'

ಅಂಗಡಿಯಲ್ಲಿ ಸಿಗರೇಟ್ ಸೇದಬೇಡ ಎಂದಿದ್ದಕ್ಕೇ ಯುವಕನೋರ್ವ ವ್ಯಕ್ತಿಗೆ 9 ಬಾರಿ ಇರಿದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಧೂಮಪಾನ ವಿಚಾರವಾಗಿ ಗಲಾಟೆ
ಧೂಮಪಾನ ವಿಚಾರವಾಗಿ ಗಲಾಟೆ

ನವದೆಹಲಿ: ಅಂಗಡಿಯಲ್ಲಿ ಸಿಗರೇಟ್ ಸೇದಬೇಡ ಎಂದಿದ್ದಕ್ಕೇ ಯುವಕನೋರ್ವ ವ್ಯಕ್ತಿಗೆ 9 ಬಾರಿ ಇರಿದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ನೈಋತ್ಯ ದೆಹಲಿ  ಕಿಶನ್‌ಗಢ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಹೇರ್ ಕಟಿಂಗ್ ಶಾಪ್ ನಲ್ಲಿ ಧೂಮಪಾನ ಮಾಡಬೇಡ ಎಂದಿದ್ದಕ್ಕೇ ಯುವಕನೋರ್ವ ವ್ಯಕ್ತಿಗೆ 9 ಬಾರಿ ಇರಿದ್ದಾನೆ. ಮೂಲಗಳ ಪ್ರಕಾರ  38 ವರ್ಷದ ಅಭಯ್ ಕುಮಾರ್ ಹೇರ್ ಕಟಿಂಗ್ ಎಂದು ಹೋಗಿದ್ದಾಗ ಅದೇ ಸಮಯದಲ್ಲಿ ಸ್ಥಳೀಯ ಜಮೀನುದಾರರ ಮಗ ಮೋಹಿತ್ ಮಹ್ಲಾವತ್ (22 ವರ್ಷ) ಕುಡಿದ ಅಮಲಿನಲ್ಲಿ ಅಂಗಡಿ ಪ್ರವೇಶಿಸಿದ್ದ. 

ಈ ವೇಳೆ ಅಂಗಡಿಯಲ್ಲೇ ಅತ ಧೂಮಪಾನ ಮಾಡುತ್ತಿದ್ದ. ಇದರಿಂದ ವಾಸನೆ ಸಹಿಸಲಾರದೇ ಅಭಯ್ ಕುಮಾರ್ ಅಂಗಡಿಯಿಂದ ಹೊರಗೆ ಹೋಗಿ ಧೂಮಪಾನ ಮಾಡುವಂತೆ ಹೇಳಿದ್ದಾರೆ. ಈ ವೇಳೆ ಅಭಯ್ ಕುಮಾರ್ ಮತ್ತು ಮೋಹಿತ್ ಮಹ್ಲಾವತ್ ನಡುವೆ ವಾಗ್ವಾದ ನಡೆದಿದ್ದು, ಮಾತಿನ ಚಕಮಕಿ ತಾರಕಕ್ಕೇರಿ ಮೋಹಿತ್ ಮಹ್ಲಾವತ್ ಅಲ್ಲೇ ಇದ್ದ ಕತ್ತರಿ ತೆಗೆದುಕೊಂಡು ಅಭಯ್ ಕುಮಾರ್ ಗೆ 9 ಬಾರಿ ಇರಿದಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಕುಮಾರ್ ಅವರ ಎದೆಯ ಮೇಲೆ ನಾಲ್ಕು ಸೇರಿದಂತೆ ದೇಹದಾದ್ಯಂತ ಒಂಬತ್ತು ಗಾಯಗಳಾಗಿವೆ. ಕೂಡಲೇ ಸಂತ್ರಸ್ಥ ಅಭಯ್ ಕುಮಾರ್ ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಇನ್ನು ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕಿಶನ್‌ಗಢ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಹಲ್ಲೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ ಅಡಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com