ನೊಯ್ಡಾ: ಫ್ಯಾಷನ್ ಶೋ ವೇಳೆ ರ್ಯಾಂಪ್ ವಾಕ್ ಮಾಡುತ್ತಿರುವಾಗ ಕಬ್ಬಿಣದ ಪಿಲ್ಲರ್ ಬಿದ್ದು 24 ವರ್ಷದ ಮಾಡೆಲ್ ವೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನೋಯ್ಡಾದಲ್ಲಿ ನಡೆದಿದೆ.
ಮೃತ ರೂಪದರ್ಶಿಯನ್ನು ವಂಶಿಕಾ ಚೋಪ್ರಾ (24) ಎಂದು ಗುರುತಿಸಲಾಗಿದೆ. ನೋಯ್ಡಾದ ಸೆಕ್ಟರ್ 16 ಎ ನಲ್ಲಿರುವ ಫಿಲ್ಮ್ ಸಿಟಿಯ ಲಕ್ಷ್ಮಿ ಸುಡಿಯೋದಲ್ಲಿ ದುರ್ಘಟನೆ ಸಂಭವಿಸಿದೆ.
ಫ್ಯಾಷನ್ ಶೋನಲ್ಲಿ ವಂಶಿಕಾ ಅವರು ಬಾಬಿ ರಾಜ್ ಎಂಬ ಯುವಕನೊಂದಿಗೆ ರ್ಯಾಂಪ್ ವಾಕ್ ಮಾಡುತ್ತಿದ್ದರು. ವೇದಿಕೆ ಮೇಲೆ ಲೈಟ್ಸ್‌ಗಾಗಿ ಕಬ್ಬಿಣದ ಕಂಬವನ್ನು ಅಳವಡಿಸಲಾಗಿತ್ತು. ರ್ಯಾಂಪ್ ವಾಕ್ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಈ ಕಬ್ಬಿಣದ ಕಂಬ ಮಾಡೆಲ್ ಮೇಲೆ ಬಿದ್ದಿದೆ.
ಕೂಡಲೇ ವಂಶಿಕಾ ಹಾಗೂ ಬಾಬಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾಡೆಲ್ ಮೃತಪಟ್ಟಿದ್ದಾರೆ. ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ವಂಶಿಕಾ ಅವರ ಸಾವಿನ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಸಂಬಂಧ ಪೊಲೀಸರು ಫ್ಯಾಷನ್ ಶೋ ಆಯೋಜಕ ಮತ್ತು ಲೈಟಿಂಗ್ ಕಾರ್ಯದಲ್ಲಿ ತೊಡಗಿದ್ದ 4 ಜನರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ನೋಯ್ಡಾದ ಹೆಚ್ಚುವರಿ ಡಿಸಿಪಿ ಮೋಹನ್ ಅವಸ್ತಿ ತಿಳಿಸಿದ್ದಾರೆ.
ಫ್ಯಾಷನ್ ಶೋಗೆ ಯಾವುದೇ ಅನುಮತಿಯನ್ನು ಪಡೆಯಲಾಗಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement