ಚೆನ್ನೈ: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಮತ್ತು ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಸಂಬಂಧ ಕೇಸ್ ದಾಖಲಾದ ನಂತರ ಡಿಎಂಕೆ ಮಾಜಿ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ಬೆನ್ನಲ್ಲೇ, ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಮೂರ್ತಿ ಅವರ ವಿವಾದಾತ್ಮಕ ಹೇಳಿಕೆ ವ್ಯಾಪಕ ಟೀಕೆಗಳಿಗೆ ಗುರಿಯಾಗಿತ್ತು. ಕೀಳುಮಟ್ಟದ ಹೇಳಿಕೆ ನೀಡಿರುವುದು ದೃಢಪಟ್ಟ ನಂತರ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಖುಷ್ಬೂ ಸುಂದರ್ ಅವರ ಬಗ್ಗೆ ಟೀಕೆ ಮಾಡಿದ ಆರೋಪದ ಮೇಲೆ ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ.
ಅಲ್ಲದೇ, ರಾಜ್ಯಪಾಲ ರವಿ ಅವರನ್ನು ಅವಹೇಳನ ಮಾಡಿರುವ ವಿಡಿಯೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದ ಬಿಜೆಪಿಯ ಅಮರ್ ಪ್ರಸಾದ್ ರೆಡ್ಡಿ, ಪೊಲೀಸರಿಗೆ ಡಿಎಂಕೆ ವಕ್ತಾರರ ವಿರುದ್ಧ ದೂರು ನೀಡಿದ್ದರು. ಇದಾದ ಕೆಲ ಗಂಟೆಗಳ ನಂತರ ಟ್ವೀಟ್ ಮಾಡಿ, ಸುದ್ದಿಗೋಷ್ಠಿ ನಡೆಸಿದ ಖುಷ್ಬೂ ಸುಂದರ್, ಕಣ್ಣೀರು ಹಾಕಿದರು. ಈಗಾಗಲೇ ರಾಷ್ಟ್ರೀಯ ಹಾಗೂ ತಮಿಳುನಾಡು ರಾಜ್ಯ ಮಹಿಳಾ ಆಯೋಗ ಸಂಪರ್ಕಿಸಿದ್ದು, ಭಯಪಡದಂತೆ ಎನ್ ಸಿಡಬ್ಲ್ಯೂ ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದರು.
ಮಹಿಳೆಯರನ್ನು ನಿಂದಿಸುವುದು, ಅವರ ಬಗ್ಗೆ ಅಸಭ್ಯವಾದ ಹೇಳಿಕೆ ನೀಡುವುದು ಡಿಎಂಕೆ ನಾಯಕರ ಚಾಳಿಯಾಗಿದೆ. ಇಂತಹ ಗೂಂಡಾಗಳಿಗೆ ಡಿಎಂಕೆ ಸುರಕ್ಷಿತ ತಾಣವಾಗಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಮುಖ್ಯಮಂತ್ರಿ ಸ್ಟಾಲಿನ್ ಗೆ ತಮ್ಮ ಟ್ವೀಟ್ ನ್ನು ಖುಷ್ಬೂ ಟ್ಯಾಗ್ ಮಾಡಿದ್ದರು.
Advertisement