ಚೆನ್ನೈ: ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಎಲ್ಲಾ ವಲಸಿಗ ಕಾರ್ಮಿಕರು ಸುರಕ್ಷಿತವಾಗಿದ್ದು, ವದಂತಿ ಹರಡಿ ಆತಂಕ ಸೃಷಿಸುವವರ ವಿರುದ್ಧ ಕ್ಷಿಪ್ರಗತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಭರವಸೆ ನೀಡಿದ್ದಾರೆ.
ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸ್ಟಾಲಿನ್, ಕಾರ್ಮಿಕರಿಗೆ ಯಾವುದೇ ತೊಂದರೆಯಾಗಲ್ಲ, ಎಲ್ಲಾ ಕಾರ್ಮಿಕರು ನಮ್ಮವರಾಗಿದ್ದು, ತಮಿಳುನಾಡಿನ ಬೆಳವಣಿಗೆಯಲ್ಲಿ ನೆರವಾಗುತ್ತಿದ್ದಾರೆ. ಅವರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲ್ಲ ಎಂದು ಭರವಸೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ಕೆಲಸ ಮಾಡುವ ಬಗ್ಗೆ ಉತ್ತರ ರಾಜ್ಯಗಳ ಕಾರ್ಮಿಕರು ಯಾವುದೇ ರೀತಿಯ ಆತಂಕವನ್ನು ಹೊಂದುವ ಅಗತ್ಯವಿಲ್ಲ, ಯಾರಾದರೂ ಅವರನ್ನು ಬೆದರಿಸುವ ಸಂದರ್ಭವಿದ್ದಾಗ ಪೊಲೀಸರಿಗೆ ಕೂಡಲೇ ಮಾಹಿತಿ ನೀಡಿದ್ದರೆ ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಅವರ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಮಿಳುನಾಡಿನಲ್ಲಿ ಇತರ ರಾಜ್ಯಗಳ ಕಾರ್ಮಿಕರ ಮೇಲೆ ದಾಳಿ ವದಂತಿಗಳು ಭಾರತೀಯ ರಾಷ್ಟ್ರದ ವಿರುದ್ಧವಾಗಿದ್ದು,ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುತ್ತವೆ. ಕೆಲವರು ಒಂದು ವಿಷಯವಲ್ಲದ ಮೇಲೆ ಅಗ್ಗದ ರಾಜಕೀಯ ಮಾಡುತ್ತಿರುವುದು ಖಂಡನೀಯ. ವದಂತಿಗಳ ಮೂಲಕ ಭಯ ಹುಟ್ಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಟಾಲಿನ್ ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾರ್ಚ್ 2 ರಂದು ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ದಾಳಿಗಳ ವರದಿಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು ಮತ್ತು ಅವರ ಉಪ ತೇಜಸ್ವಿ ಯಾದವ್ ತಮಿಳುನಾಡು ಭೇಟಿ ನೀಡಿದ್ದಕ್ಕಾಗಿ ಪ್ರತಿಪಕ್ಷ ಬಿಜೆಪಿಯಿಂದ ಟೀಕೆಗಳನ್ನು ಎದುರಿಸಿದರು. ತಮಿಳುನಾಡಿನಲ್ಲಿ ಬಿಹಾರಿಗಳನ್ನು 'ಕೊಲ್ಲಲಾಗಿದೆ' ಎಂದು ಬಿಹಾರ ಬಿಜೆಪಿ ಪಕ್ಷದ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಆರೋಪಿಸಿದ್ದರು.
Advertisement