ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ: 8 ಪ್ರತಿಪಕ್ಷಗಳಿಂದ ಪ್ರಧಾನಿ ಮೋದಿಗೆ ಪತ್ರ, ಹತ್ತಿರ ಸುಳಿಯದ ಕಾಂಗ್ರೆಸ್!

ವಿಪಕ್ಷ ನಾಯಕರನ್ನು ಮಟ್ಟ ಹಾಕಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ, ಎಂಟು ವಿರೋಧ ಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಆದರೆ, ಈ ಪತ್ರದಲ್ಲಿ ಕಾಂಗ್ರೆಸ್‌ ಮಾತ್ರ ಈ ಪತ್ರದಲ್ಲಿ ಶಾಮೀಲಾಗದಿರುವುದು ಕುತೂಹಲ ಕೆರಳುವಂತೆ ಮಾಡಿದೆ.

ನವದೆಹಲಿ: ವಿಪಕ್ಷ ನಾಯಕರನ್ನು ಮಟ್ಟ ಹಾಕಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ, ಎಂಟು ವಿರೋಧ ಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಆದರೆ, ಈ ಪತ್ರದಲ್ಲಿ ಕಾಂಗ್ರೆಸ್‌ ಮಾತ್ರ ಈ ಪತ್ರದಲ್ಲಿ ಶಾಮೀಲಾಗದಿರುವುದು ಕುತೂಹಲ ಕೆರಳುವಂತೆ ಮಾಡಿದೆ.

ಆಮ್ ಆದ್ಮಿ ಪಕ್ಷ (ಎಎಪಿ)ದ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿರುವುದು, ಸದ್ಯ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕರನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ.

ಈ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಹಾಗೂ ಬಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಶಿವಸೇನೆಯ ಉದ್ದವ್ ಠಾಕ್ರೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಹಾರ ಉಪಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದಾರೆ.

ಭಾರತ ಈಗಲೂ ಪ್ರಜಾಸತ್ತಾತ್ಮಕ ದೇಶ ಎಂದು ನೀವು ಒಪ್ಪುತ್ತೀರಿ ಎಂದು ನಾವು ಭಾವಿಸುತ್ತೇವೆ. ವಿರೋಧ ಪಕ್ಷದ ಸದಸ್ಯರ ವಿರುದ್ಧ ಕೇಂದ್ರೀಯ ಸಂಸ್ಥೆಗಳ ಅಸ್ಪಷ್ಟ ದುರ್ಬಳಕೆಯು, ನಾವು ಪ್ರಜಾಪ್ರಭುತ್ವದಿಂದ ನಿರಂಕುಶಪ್ರಭುತ್ವಕ್ಕೆ ಪರಿವರ್ತನೆಯಾಗಿದ್ದೇವೆ ಎಂಬುದನ್ನು ಸೂಚಿಸುತ್ತದೆ.

"2014ರಿಂದ ನಿಮ್ಮ ಆಡಳಿತದ ಅಡಿಯಲ್ಲಿ ತನಿಖಾ ಸಂಸ್ಥೆಗಳು ಬುಕ್ ಮಾಡಿದ, ಬಂಧಿಸಿದ, ದಾಳಿ ಮಾಡಿದ ಅಥವಾ ವಿಚಾರಣೆಗೆ ಒಳಗಾದ ಒಟ್ಟು ಪ್ರಮುಖ ರಾಜಕಾರಣಿಗಳ ಪೈಕಿ, ಗರಿಷ್ಠ ರಾಜಕಾರಣಿಗಳು ವಿವಿಧ ಪ್ರತಿಪಕ್ಷಗಳಿಗೆ ಸೇರಿದವರಾಗಿದ್ದಾರೆ. ಕುತೂಹಲಕಾರಿಯಾಗಿ, ಬಿಜೆಪಿಗೆ ಸೇರುವ ವಿರೋಧ ಪಕ್ಷದ ರಾಜಕಾರಣಿಗಳ ವಿರುದ್ಧದ ಪ್ರಕರಣಗಳ ಬಗ್ಗೆ, ತನಿಖಾ ಸಂಸ್ಥೆಗಳು ನಿರಾಸಕ್ತಿ ವಹಸಿಉತ್ತವೆ.." ಎಂದು ಪತ್ರದಲ್ಲಿ ಅಸಮಾಧಾನ ಹೊರಹಾಕಲಾಗಿದೆ.

ಕಾಂಗ್ರೆಸ್‌ನಲ್ಲಿದ್ದ ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ ಬಿಜೆಪಿ ಸೇರ್ಪಡೆಗೊಂಡ ಬಳಿಕ, ಅವರ ವಿರುದ್ಧ ಕೇಳಿಬಂದಿದ್ದ ಶಾರದಾ ಚಿಟ್‌ ಫಂಡ್‌ ಹಗರಣ ಪ್ರಕರಣ ಮೂಲೆಗೆ ಸೇರಿತು. ಅದೇ ರೀತಿ ಪಶ್ಚಿಮ ಬಂಗಾಳದ ಮಾಜಿ ಟಿಂಎಸಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಕೇಳಿಬಂದಿದ್ದ ನಾರದ ಕುಟುಕು ಕಾರ್ಯಾಚರಣೆ ಪ್ರಕರಣ ಕೂಡ, ಅವರು ಬಿಜೆಪಿ ಸೇರಿದ ಬಳಿಕ ಹಳ್ಳ ಹಿಡಿಯಿತು. ಇದು ತನಿಖಾ ಸಂಸ್ಥೆಗಳ ಪಕ್ಷಪಾತ ವರ್ತನೆಯನ್ನು ತೋರಿಸುತ್ತದೆ..ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

"2014ರಿಂದ ಪ್ರತಿಪಕ್ಷ ನಾಯಕರ ವಿರುದ್ಧ ನಡೆದ ದಾಳಿಗಳು, ಪ್ರಕರಣಗಳು ಮತ್ತು ಬಂಧನಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಲಾಲು ಪ್ರಸಾದ್ ಯಾದವ್ (ರಾಷ್ಟ್ರೀಯ ಜನತಾ ದಳ), ಸಂಜಯ್ ರಾವತ್ (ಶಿವಸೇನೆ), ಆಜಂ ಖಾನ್ (ಸಮಾಜವಾದಿ ಪಕ್ಷ) ), ನವಾಬ್ ಮಲಿಕ್, ಅನಿಲ್ ದೇಶಮುಖ್ (ಎನ್‌ಸಿಪಿ), ಅಭಿಷೇಕ್ ಬ್ಯಾನರ್ಜಿ (ಟಿಎಂಸಿ) ವಿರುದ್ಧದ ಪ್ರಕರಣಗಳು ಇದಕ್ಕೆ ಉದಾಹರಣೆಯಾಗಿ ಕೊಡಬಹುದು.." ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

"ವಿಪಕ್ಷ ನಾಯಕರ ವಿರುದ್ಧದ ಈ ದಾಳಿಗಳು ರಾಜಕೀಯ ಪ್ರೇರಿತವಾಗಿದ್ದು, ಚುನಾವಣೆ ಹೊಂದಿಕೆ ರಾಜಕಾರಣಕ್ಕೆ ಸಹಕರಿಸುತ್ತಿವೆ.." ಎಂದು ಈ ಎಂಟು ರಾಜಕೀಯ ಪಕ್ಷಗಳು ಪ್ರಧಾನಿ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಗಂಭೀರ ಆರೋಪ ಮಾಡಲಾಗಿದೆ.

ಕುತೂಹಲಕಾರಿ ವಿಚಾರವೆಂದರೆ ತನಿಖಾ ಸಂಸ್ಥೆಗಳ ದುರುಪಯೋಗ ಖಂಡಿಸಿ, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುವ ವಿಪಕ್ಷಗಳ ನಿರ್ಧಾರದಿಂದ ಕಾಂಗ್ರೆಸ್‌ ಹೊರಗುಳಿದಿರುವುದು ಕಂಡು ಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com