ನವದೆಹಲಿ: ಗಡಿ ಭದ್ರತಾ ಪಡೆ (ಬಿಎಸ್‌ಎಫ್)ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ಮಾಜಿ ಅಗ್ನಿವೀರರಿಗೆ ಶೇ 10 ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರವು ಪ್ರಕಟಿಸಿದೆ.
ಇದಕ್ಕಾಗಿ, ಗೃಹ ಸಚಿವಾಲಯವು (ಎಂಎಚ್ಎ) ಗಡಿ ಭದ್ರತಾ ಪಡೆ, ಜನರಲ್ ಡ್ಯೂಟಿ ಕೇಡರ್ (ನಾನ್ ಗೆಜೆಟೆಡ್) ನೇಮಕಾತಿ ನಿಯಮಗಳು, 2015 ಅನ್ನು ತಿದ್ದುಪಡಿ ಮಾಡಿದೆ. ಇದು ಗುರುವಾರದಿಂದ ಜಾರಿಗೆ ಬಂದಿದೆ.
ಮಾರ್ಚ್ 6 ರಂದು ಗೃಹ ಸಚಿವಾಲಯವು ಹೊರಡಿಸಿದ ಅಧಿಸೂಚನೆಯಲ್ಲಿ, ಕಾನ್ಸ್‌ಟೇಬಲ್‌ಗಳ ನೇಮಕಾತಿಯಲ್ಲಿ ಮಾಜಿ ಅಗ್ನಿವೀರ್‌ನ ಮೊದಲ ಬ್ಯಾಚ್‌ನ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು ಐದು ವರ್ಷಗಳವರೆಗೆ ಸಡಿಲಗೊಳಿಸಲಾಗುತ್ತದೆ ಎಂದು ಸೇರಿಸಲಾಗಿದೆ.
ನಂತರದ ಬ್ಯಾಚ್‌ಗೆ ಮೂರು ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ ಎಂದು ಅದು ಹೇಳಿದೆ.
ಅಧಿಸೂಚನೆಯ ಪ್ರಕಾರ, ಮಾಜಿ ಅಗ್ನಿವೀರರಿಗೆ ದೈಹಿಕ ದಕ್ಷತೆಯ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.
Advertisement