9 ಗಂಟೆ ವಿಚಾರಣೆ ಬಳಿಕ ಇಡಿ ಕಚೇರಿಯಿಂದ ತೆರಳಿದ ಕವಿತಾ, ಮತ್ತೆ ಮಾ.16ಕ್ಕೆ ಹಾಜರಾಗುವಂತೆ ಸಮನ್ಸ್
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ಜಾರಿ ನಿರ್ದೇಶನಾಲಯ(ಇಡಿ)ದ ಮುಂದೆ ವಿಚಾರಣೆಗೆ ಹಾಜರಾಗಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರು ಸತತ 9 ಗಂಟೆಗಳ ವಿಚಾರಣೆ ನಂತರ ಇಡಿ ಕಚೇರಿಯಿಂದ ತೆರಳಿದ್ದಾರೆ.
44 ವರ್ಷದ ಕೆ ಕವಿತಾ ಅವರನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಒಂಬತ್ತು ಗಂಟೆಗಳ ವಿಚಾರಣೆ ಮತ್ತು ಹೇಳಿಕೆ ದಾಖಲಿಸಿದ ನಂತರ ರಾತ್ರಿ 8 ಗಂಟೆ ಸುಮಾರಿಗೆ ಇಡಿ ಪ್ರಧಾನ ಕಚೇರಿಯಿಂದ ತೆರಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್‌ಎಸ್ ನಾಯಕಿಗೆ ಮಾರ್ಚ್ 16 ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕವಿತಾ ಅವರು ಇಂದು ಬೆಳಗ್ಗೆ 11.15ರ ಸುಮಾರಿಗೆ ನಿರ್ದೇಶನಾಲಯದ ಪ್ರಧಾನ ಕಛೇರಿ ಆಗಮಿಸಿದ್ದರು. ಎಎಪಿ ಸರ್ಕಾರಕ್ಕೆ 100 ಕೋಟಿ ರೂಪಾಯಿ ಲಂಚ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ, ಇಡಿ ವಶದಲ್ಲಿರುವ ಸೌತ್ ಗ್ರೂಪ್ ನ ಅರುಣ್ ರಾಮಚಂದ್ರ ಪಿಳ್ಳೆ ಅವರ ಸಮ್ಮುಖದಲ್ಲೇ ಕವಿತಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
'ಸೌತ್ ಗ್ರೂಪ್' ಎಂಬುದು ಕವಿತಾ, ಅರಬಿಂದೋ ಫಾರ್ಮಾ ಪ್ರವರ್ತಕ ಶರತ್ ರೆಡ್ಡಿ, ವೈಎಸ್ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಮತ್ತು ಇತರರೊಂದಿಗೆ ಸಂಪರ್ಕ ಹೊಂದಿದ ಮದ್ಯದ ಕಾರ್ಟೆಲ್ ಆಗಿದೆ. ಪಿಳ್ಳೈ ಅವರು ಕವಿತಾ ಅವರ ಬೇನಾಮಿ ಹೂಡಿಕೆಗಳನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ.

