ಜಾರ್ಖಂಡ್: ರೈಲ್ವೆ ಹಳಿ ದಾಟುವಾಗ ರಾಜಧಾನಿ ಎಕ್ಸ್‌ಪ್ರೆಸ್‌ಗೆ ಸಿಲುಕಿ ಮೂವರು ಸಾವು, ದೇಹದ ಭಾಗಗಳು ಚೆಲ್ಲಾಪಿಲ್ಲಿ
ಧನ್ಬಾದ್: ಜಾರ್ಖಂಡ್‌ನ ಧನ್ಬಾದ್ ರೈಲ್ವೆ ವಿಭಾಗದಲ್ಲಿ ಹಳಿಗಳನ್ನು ದಾಟುತ್ತಿದ್ದಾಗ ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ಗೆ ಸಿಲುಕಿ ಮೂವರು ವ್ಯಕ್ತಿಗಳು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ನೇತಾಜಿ ಸುಭಾಸ್ ಚಂದ್ರ ಬೋಸ್ ಗೊಮೊಹ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ಆರ್‌ಪಿಎಫ್ ಇನ್ಸ್‌ಪೆಕ್ಟರ್ ವಿಜಯ್ ಶಂಕರ್ ತಿಳಿಸಿದ್ದಾರೆ.
ಪ್ಲಾಟ್‌ಫಾರ್ಮ್ ಸಂಖ್ಯೆ 3 ಅನ್ನು ತಲುಪಲು ಹಳಿಗಳನ್ನು ದಾಟುವಾಗ ವೇಗವಾಗಿ ಬರುತ್ತಿದ್ದ ಹೌರಾ-ನವದೆಹಲಿಯ ರಾಜಧಾನಿ ಎಕ್ಸ್‌ಪ್ರೆಸ್ ಅಡಿ ಸಿಲುಕಿದ್ದಾರೆ. ಈ ರೈಲು ಈ ನಿಲ್ದಾಣದಲ್ಲಿ ನಿಲುಗಡೆಯನ್ನು ಹೊಂದಿರಲಿಲ್ಲ.
ಘರ್ಷಣೆಯ ಪರಿಣಾಮ ದೇಹದ ಭಾಗಗಳು ಸ್ಥಳದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಅಧಿಕಾರಿ ಹೇಳಿದರು.
'ಮೃತರನ್ನು ಮನೋಜ್ ಸಾಬ್ (19), ಶಿವಚರಣ್ ಸಾಬ್ (20) ಮತ್ತು ಬಬ್ಲೂ ಕುಮಾರ್ (20) ಎಂದು ಗುರುತಿಸಲಾಗಿದೆ. ಅಸನ್ಸೋಲ್-ಗೋಮೊಹ್ ಪ್ಯಾಸೆಂಜರ್ ರೈಲಿನಿಂದ ಫ್ಲಾಟ್‌ಫಾರ್ಮ್ 4ರಲ್ಲಿ ಇಳಿದ ಅವರು, ಪ್ಲಾಟ್‌ಫಾರ್ಮ್ ಸಂಖ್ಯೆ 3 ಅನ್ನು ತಲುಪಲು ಹಳಿಗಳನ್ನು ದಾಟುತ್ತಿದ್ದರು. ಶನಿವಾರ ಮುಂಜಾನೆ ಅವರ ಸಂಬಂಧಿಕರು ಬಟ್ಟೆಗಳ ಆಧಾರದ ಮೇಲೆ ಅವರನ್ನು ಗುರುತಿಸಿದ್ದಾರೆ' ಎಂದು ಅವರು ಹೇಳಿದರು.
ದೇಹದ ಭಾಗಗಳನ್ನು ಸಂಗ್ರಹಿಸುವುದಕ್ಕಾಗಿ ಆ ಮಾರ್ಗದಲ್ಲಿ ಕೆಲಕಾಲ ರೈಲು ಸಂಚಾರವನ್ನು ನಿಲ್ಲಿಸಲಾಯಿತು ಮತ್ತು ಸೀಲ್ದಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಹಲವಾರು ಇತರ ರೈಲುಗಳನ್ನು ಡೌನ್ ಲೈನ್ ಮೂಲಕ ಹಾದು ಹೋದವು.
ಶಿವಚರಣ್ ಮತ್ತು ಬಬ್ಲೂ ಕುಮಾರ್ ಧನ್ಬಾದ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅವರು ಸದಾನಂದ ಮೇಳದಲ್ಲಿ ಪಾಲ್ಗೊಳ್ಳಲು ಗೊಮೊಹ್‌ಗೆ ಹೋಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ