'ಭ್ರಷ್ಟ' ಬಿಜೆಪಿ ಸರ್ಕಾರದ ಶೋಷಣೆಯನ್ನು ಜನ ನೋಡುತ್ತಿದ್ದಾರೆ, ಸಮಯ ಬಂದಾಗ ಉತ್ತರಿಸುತ್ತಾರೆ: ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ರಾಹುಲ್ ಗಾಂಧಿಗೆ ದೆಹಲಿ ಪೊಲೀಸರ ನೋಟಿಸ್ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಜನರು 'ಭ್ರಷ್ಟ ಬಿಜೆಪಿ ಸರ್ಕಾರದ' ಎಲ್ಲಾ ಶೋಷಣೆಗಳನ್ನು ನೋಡುತ್ತಿದ್ದಾರೆ ಮತ್ತು ಸಮಯ ಬಂದಾಗ ಉತ್ತರಿಸುತ್ತಾರೆ ಎಂದು ಹೇಳಿದರು.
ಪ್ರಿಯಾಂಕ ಗಾಂಧಿ ವಾದ್ರಾ
ಪ್ರಿಯಾಂಕ ಗಾಂಧಿ ವಾದ್ರಾ
Updated on

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ರಾಹುಲ್ ಗಾಂಧಿಗೆ ದೆಹಲಿ ಪೊಲೀಸರ ನೋಟಿಸ್ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಜನರು 'ಭ್ರಷ್ಟ ಬಿಜೆಪಿ ಸರ್ಕಾರದ' ಎಲ್ಲಾ ಶೋಷಣೆಗಳನ್ನು ನೋಡುತ್ತಿದ್ದಾರೆ ಮತ್ತು ಸಮಯ ಬಂದಾಗ ಉತ್ತರಿಸುತ್ತಾರೆ ಎಂದು ಹೇಳಿದರು.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ನೀಡಿದ 'ಮಹಿಳೆಯರು ಇನ್ನೂ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ' ಎಂಬ ಹೇಳಿಕೆಯ ಕುರಿತು ಮಾಹಿತಿ ಸಂಗ್ರಹಿಸಲು ಭಾನುವಾರ ದೆಹಲಿ ಪೊಲೀಸ್ ತಂಡ ರಾಹುಲ್ ಗಾಂಧಿ ಅವರ ನಿವಾಸಕ್ಕೆ ತಲುಪಿದ ನಂತರ ಪ್ರಿಯಾಂಕಾ ಕಿಡಿಕಾರಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, 'ದೌರ್ಜನ್ಯದಿಂದ ಬಳಲುತ್ತಿರುವ ಮಹಿಳೆಯರು, ದಲಿತರು, ಬುಡಕಟ್ಟು ಜನರು, ಬಡವರು, ರೈತರು ಮತ್ತು ಯುವಕರ ಧ್ವನಿಯನ್ನು ಏಕೆ ಎತ್ತಿದ್ದೀರಿ ಎಂದು ರಾಹುಲ್ ಗಾಂಧಿಗೆ ನೋಟಿಸ್ ನೀಡಲಾಗುತ್ತಿದೆಯೇ?. ಭ್ರಷ್ಟ ಬಿಜೆಪಿ ಸರ್ಕಾರದ ಎಲ್ಲಾ ಶೋಷಣೆಗಳನ್ನು ದೇಶದ ಜನರು ಗಮನಿಸುತ್ತಿದ್ದಾರೆ ಮತ್ತು ಸಮಯ ಬಂದಾಗ ಉತ್ತರ ನೀಡಲಿದ್ದಾರೆ' ಎಂದು ಅವರು ಹೇಳಿದರು.

ಪ್ರಧಾನಿ ಸ್ನೇಹಿತ ಗೌತಮ್ ಅದಾನಿ ವಿದೇಶದಲ್ಲಿ 38 ಶೆಲ್ ಕಂಪನಿಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಅವರಿಗೆ ನೋಟಿಸ್ ಇಲ್ಲ. ಅದಾನಿ ಮೂಲಕ ರಕ್ಷಣಾ ವಲಯದಲ್ಲಿ ನಕಲಿ ಕಂಪನಿ ಒಳನುಸುಳುವಿಕೆ ಬಗ್ಗೆ ನೋಟಿಸ್ ಇಲ್ಲ.  ಅದಾನಿಗೆ ಅನುಕೂಲವಾಗುವಂತೆ ಸರ್ಕಾರವೇ ನಿಯಮಗಳನ್ನು ಬದಲಾಯಿಸಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲಾಗಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದರು.

ಮತ್ತೊಂದು ಟ್ವೀಟ್‌ನಲ್ಲಿ, ಈವ್ ಟೀಸಿಂಗ್ (ಸಾರ್ವಜನಿಕ ಸ್ಥಳದಲ್ಲಿ ಮಹಿಳೆಗೆ ಪುರುಷನಿಂದ ಅನಗತ್ಯ ಲೈಂಗಿಕ ಟೀಕೆಗಳು ಅಥವಾ ಕಿರುಕುಳ) ಆರೋಪದ ಮೇಲೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

'ಮಾಧ್ಯಮಗಳಲ್ಲಿ, ಉತ್ತರ ಪ್ರದೇಶದಲ್ಲಿ 'ಅಪರಾಧಿಗಳು ನಡುಗುತ್ತಿದ್ದಾರೆ' ಎಂದು ಜಾಹೀರಾತುಗಳು ಹೇಳುತ್ತವೆ. ಆದರೆ, ವಾಸ್ತವದಲ್ಲಿ, ಅಪರಾಧಿಗಳು ನಿರ್ಭಯವಾಗಿ ದಿನನಿತ್ಯ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಮತ್ತು ಸರ್ಕಾರಿ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಬೆಲೆಯಿಲ್ಲ' ಎಂದು ಅವರು ಹೇಳಿದರು.

ದೆಹಲಿ ಪೊಲೀಸರ ಕ್ರಮವನ್ನು ಕಾಂಗ್ರೆಸ್ ಖಂಡಿಸಿದ್ದು, ಪೊಲೀಸರು ಐದು ದಿನಗಳಲ್ಲಿ ಮೂರನೇ ಬಾರಿಗೆ ಭಾನುವಾರ ರಾಹುಲ್ ಗಾಂಧಿ ಅವರ ಬಾಗಿಲು ತಟ್ಟಿದ್ದು, ಕ್ರಮ ಕೈಗೊಳ್ಳಲು ಸಂತ್ರಸ್ತ ಮಹಿಳೆಯರ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದಾರೆ.

ವಿರೋಧ ಪಕ್ಷವು ಕಿರುಕುಳ, ಬೆದರಿಕೆ ಮತ್ತು ರಾಜಕೀಯ ಸೇಡಿನ ಆರೋಪದ ಮೂಲಕ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದಿದೆ. ಆದರೆ, ಬಿಜೆಪಿ ಈ ಆರೋಪವನ್ನು ತಿರಸ್ಕರಿಸಿತು ಮತ್ತು ಪೊಲೀಸರು 'ತಮ್ಮ ಕಾನೂನುಬದ್ಧ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ' ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com