ಸ್ವಂತ ಮಗು ಪಡೆಯಲು ನೆರೆಮನೆಯ ಅಪ್ರಾಪ್ತ ಬಾಲಕಿಯನ್ನು ನರಬಲಿ ನೀಡಿದ ವ್ಯಕ್ತಿ, ಆರೋಪಿ ಬಂಧನ

ಸ್ವಂತ ಮಗುವನ್ನು ಪಡೆಯಲು 'ನರಬಲಿ' ಹೆಸರಲ್ಲಿ ತನ್ನ ನೆರೆಯಮನೆಯ ಅಪ್ರಾಪ್ತ ಬಾಲಕಿಯನ್ನು ಕೊಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ದೇಹವನ್ನು ಗೋಣಿ ಚೀಲದೊಳಗೆ ತುಂಬಲಾಗಿದ್ದು, ಆಕೆಯ ತಲೆ ಸೇರಿದಂತೆ ದೇಹದ ಮೇಲೆಲ್ಲ ಮಾರಣಾಂತಿಕ ಗಾಯದ ಗುರುತುಗಳು ಪತ್ತೆಯಾಗಿವೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೋಲ್ಕತ್ತಾ: ಸ್ವಂತ ಮಗುವನ್ನು ಪಡೆಯಲು 'ನರಬಲಿ' ಹೆಸರಲ್ಲಿ ತನ್ನ ನೆರೆಯಮನೆಯ ಅಪ್ರಾಪ್ತ ಬಾಲಕಿಯನ್ನು ಕೊಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಏಳು ವರ್ಷದ ಬಾಲಕಿಯ ಮೃತದೇಹವನ್ನು ಭಾನುವಾರ ತಡರಾತ್ರಿ ದಕ್ಷಿಣ ಕೋಲ್ಕತ್ತಾದ ತಿಲಜಾಲದಲ್ಲಿರುವ ಆರೋಪಿಯ ನಿವಾಸದಿಂದ ವಶಪಡಿಸಿಕೊಳ್ಳಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಬಾಲಕಿಯ ದೇಹವನ್ನು ಗೋಣಿ ಚೀಲದೊಳಗೆ ತುಂಬಲಾಗಿದ್ದು, ಆಕೆಯ ತಲೆ ಸೇರಿದಂತೆ ದೇಹದ ಮೇಲೆಲ್ಲ ಮಾರಣಾಂತಿಕ ಗಾಯದ ಗುರುತುಗಳು ಪತ್ತೆಯಾಗಿವೆ. 

ಬಿಹಾರ ಮೂಲದ ಅಲೋಕ್ ಕುಮಾರ್ ಕೋಲ್ಕತ್ತಾದಲ್ಲಿ ವಾಸವಾಗಿದ್ದರು. ವಿಚಾರಣೆಯ ವೇಳೆ, 'ಮಾಂತ್ರಿಕನ' ನಿರ್ದೇಶನದ ಮೇರೆಗೆ ಮಗುವನ್ನು ನರಬಲಿ ನೀಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಮಾಂತ್ರಿಕನು ಅಪ್ರಾಪ್ತ ಬಾಲಕಿಯ ತ್ಯಾಗದಿಂದ ತನಗೆ ಮಗು ಸಿಗುತ್ತದೆ ಎಂದು ಹೇಳಿದ್ದಾಗಿ ತಿಳಿಸಿದ್ದಾನೆ.

ಮಾಂತ್ರಿಕನು ಬಿಹಾರ ಮೂಲದವನಾಗಿದ್ದು, ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ನಮ್ಮ ಅಧಿಕಾರಿಗಳ ತಂಡ ಸೋಮವಾರ ಬಿಹಾರಕ್ಕೆ ತೆರಳಲಿದೆ ಎಂದು ನಗರದ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನ್ನ ಪತ್ನಿಗೆ ಮೂರು ಬಾರಿ ಗರ್ಭಪಾತವಾಗಿದೆ. ಹೀಗಾಗಿ, ಮಾಂತ್ರಿಕನನ್ನು ಸಂಪರ್ಕಿಸಿದ್ದೆ. ಅಪ್ರಾಪ್ತ ಬಾಲಕಿಯನ್ನು  ಬಲಿ ಕೊಟ್ಟರೆ ತಮಗೆ ಮಗುವಾಗುವುದಾಗಿ ಆತ ಹೇಳಿದ್ದಾಗಿ ಎಂದು ಆರೋಪಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. 

ಬಾಲಕಿಯ ಪಾಲಕರ ಪ್ರಕಾರ, ಭಾನುವಾರ ಬೆಳಗ್ಗೆ ಸಮೀಪದಲ್ಲೇ ಕಸ ಹಾಕಲು ತೆರಳಿದ್ದ ಬಾಲಕಿ, ಅಂದಿನಿಂದ ನಾಪತ್ತೆಯಾಗಿದ್ದಳು. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬಾಲಕಿ ಅಥವಾ ಆಕೆಯ ಶವವನ್ನು ಪಕ್ಕದ ಮನೆಯಲ್ಲೇ ಅಡಗಿಸಿಟ್ಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು.

ಸ್ಥಳೀಯರ ಎಲ್ಲಾ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಮತ್ತು ಅಂತಿಮವಾಗಿ ಭಾನುವಾರ ತಡರಾತ್ರಿ ಅಲೋಕ್ ಕುಮಾರ್ ಮನೆಯಿಂದ ಮೃತದೇಹವನ್ನು ಹೊರತೆಗೆಯಲಾಯಿತು. ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು.

ಈ ಬೆಳವಣಿಗೆಯಿಂದ ಆಕ್ರೋಶಗೊಂಡ ಸ್ಥಳೀಯರು ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸಿ ಸ್ಥಳೀಯ ತಿಲಜಾಲ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com