ಕಸಾಯಿಖಾನೆಗೂ ‘ಪರಿಸರ ಇಲಾಖೆ ಅನುಮೋದನೆ’ ನೀಡುವ ಕುರಿತು ತೀರ್ಮಾನ ಕೈಗೊಳ್ಳಿ: ಸಚಿವಾಲಯಕ್ಕೆ ಹಸಿರು ನ್ಯಾಯಾಧಿಕರಣ ಸೂಚನೆ

ಕಸಾಯಿಖಾನೆಗಳು ಹಾಗೂ ಮಾಂಸ ಸಂಸ್ಕರಣಾ ಘಟಕಗಳನ್ನು ‘ಪರಿಸರ ಅನುಮೋದನೆ’ ವ್ಯಾಪ್ತಿಗೆ ಸೇರಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ನಿರ್ದೇಶನ ನೀಡಿದೆ.
ಹಸಿರು ನ್ಯಾಯಾಧಿಕರಣ
ಹಸಿರು ನ್ಯಾಯಾಧಿಕರಣ

ನವದೆಹಲಿ: ಕಸಾಯಿಖಾನೆಗಳು ಹಾಗೂ ಮಾಂಸ ಸಂಸ್ಕರಣಾ ಘಟಕಗಳನ್ನು ‘ಪರಿಸರ ಅನುಮೋದನೆ’ ವ್ಯಾಪ್ತಿಗೆ ಸೇರಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್ ನೇತೃತ್ವದ ಎನ್‌ಜಿಟಿಯ ಪ್ರಧಾನ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಈ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಆಗಸ್ಟ್‌ 31ರೊಳಗೆ ವರದಿ ಸಲ್ಲಿಸುವಂತೆ ನ್ಯಾಯಪೀಠ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ಅಂತೆಯೇ ವಿಚಾರಣೆಯನ್ನು ಸೆಪ್ಟೆಂಬರ್‌ 14ಕ್ಕೆ ಮುಂದೂಡಿದೆ.

ಎನ್‌ಜಿಟಿಯ ಪ್ರಧಾನ ಪೀಠವು ಸಚಿವಾಲಯವು ಎರಡು ತಿಂಗಳೊಳಗೆ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ, ಎಲ್ಲಾ ದೊಡ್ಡ ಕಸಾಯಿಖಾನೆಗಳಿಗೆ (ದಿನಕ್ಕೆ 200 ಕ್ಕಿಂತ ಹೆಚ್ಚು ದೊಡ್ಡ ಪ್ರಾಣಿಗಳು ಅಥವಾ ದಿನಕ್ಕೆ 1,000 ಕ್ಕಿಂತ ಹೆಚ್ಚು ಸಣ್ಣ ಪ್ರಾಣಿಗಳ ವಧೆ ಮಾಡುವ ಕೇಂದ್ರಗಳು) ಪರಿಸರ ತೆರವಿನ ಅಗತ್ಯವು ಅನ್ವಯವಾಗುತ್ತದೆ. ಇದು ಈ ವರ್ಷ ಆಗಸ್ಟ್ 1ರಿಂದಲೇ ಅನ್ವಯವಾಗಲಿದೆ ಎಂದು ನಿರ್ದೇಶಿಸಿದೆ. 

"ಆನಂತರ, ಬಿ ವರ್ಗದ ಯೋಜನೆಗೆ ಅನ್ವಯವಾಗುವ ಕಾರ್ಯವಿಧಾನದ ಪ್ರಕಾರ ಇಐಎ (ಪರಿಸರ ಪ್ರಭಾವದ ಮೌಲ್ಯಮಾಪನ) ಇಲ್ಲದೆ ಯಾವುದೇ 'ದೊಡ್ಡ' ಕಸಾಯಿಖಾನೆಯನ್ನು ಸ್ಥಾಪಿಸಲು ಅಥವಾ ವಿಸ್ತರಿಸಲು ಸಾಧ್ಯವಿಲ್ಲ...", ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ NGT ಹೇಳಿತ್ತು.

ಕಸಾಯಿಖಾನೆಗಳಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದು, ಪರಿಸರದ ಮೇಲಾಗುತ್ತಿರುವ ಪರಿಣಾಮಗಳ ಮೌಲ್ಯಮಾಪನ ಹಾಗೂ ನಿಯಂತ್ರಣಕ್ಕಾಗಿ ಸಮರ್ಪಕ ಚೌಕಟ್ಟು ಇಲ್ಲ ಎಂದು ಅರ್ಜಿ ಸಲ್ಲಿಸಲಾಗಿತ್ತು. ಈ ವಿಷಯ ಕುರಿತು ಕ್ರಮ ಕೈಗೊಳ್ಳುವಂತೆ ಪರಿಸರ ಮತ್ತು ಅರಣ್ಯ ಸಚಿವಾಲಯ ನೇಮಿಸಿದ್ದ ತಜ್ಞರ ಸಮಿತಿ ಶಿಫಾರಸುಗಳನ್ನು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com