ನೀರಿನಲ್ಲಿ ಬಿದ್ದ ದುಬಾರಿ ಫೋನ್ ಹುಡುಕಲು ಡ್ಯಾಮ್ ನೀರು ಖಾಲಿ ಮಾಡಲು ಅನುಮತಿ ನೀಡಿದ ಅಧಿಕಾರಿಗೂ 53 ಸಾವಿರ ರೂ ದಂಡ!

ಕಳೆದು ಹೋದ ದುಬಾರಿ ಫೋನ್ ಹುಡುಕಲು ಅಧಿಕಾರಿಗೆ ಜಲಾಶಯದಿಂದ 41 ಲಕ್ಷ ಲೀಟರ್ ನೀರನ್ನು ಪೋಲು ಮಾಡಲು ಅನುಮತಿ ನೀಡಿದ ಹಿರಿಯ ಅಧಿಕಾರಿಗೂ ಛತ್ತೀಸ್ ಘಡ ಸರ್ಕಾರ 53 ಸಾವಿರ ರೂ ದಂಡ ವಿಧಿಸಿದೆ.
ದುಬಾರಿ ಮೊಬೈಲ್ ಗಾಗಿ ಡ್ಯಾಮ್ ಅನ್ನೇ ಖಾಲಿ ಮಾಡಿದ ಅಧಿಕಾರಿ
ದುಬಾರಿ ಮೊಬೈಲ್ ಗಾಗಿ ಡ್ಯಾಮ್ ಅನ್ನೇ ಖಾಲಿ ಮಾಡಿದ ಅಧಿಕಾರಿ
Updated on

ರಾಯ್ಪುರ: ಕಳೆದು ಹೋದ ದುಬಾರಿ ಫೋನ್ ಹುಡುಕಲು ಅಧಿಕಾರಿಗೆ ಜಲಾಶಯದಿಂದ 41 ಲಕ್ಷ ಲೀಟರ್ ನೀರನ್ನು ಪೋಲು ಮಾಡಲು ಅನುಮತಿ ನೀಡಿದ ಹಿರಿಯ ಅಧಿಕಾರಿಗೂ ಛತ್ತೀಸ್ ಘಡ ಸರ್ಕಾರ 53 ಸಾವಿರ ರೂ ದಂಡ ವಿಧಿಸಿದೆ.

ಹೌದು.. ಛತ್ತೀಸ್‌ಗಢ (Chhattisgarh) ಆಹಾರ ಇಲಾಖೆ ಅಧಿಕಾರಿ ರಾಜೇಶ್ ಬಿಸ್ವಾಸ್​ ( Rajesh Biswas) ಎಂಬುವವರು ಕಂಕೇರ್ ಜಿಲ್ಲೆಯ ಪರ್ಲಾಕೋಟ್ ಅಣೆಕಟ್ಟೆಯ ಬಳಿ ರಜೆ ವೇಳೆ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಸುಮಾರು 1 ಲಕ್ಷ ರೂ ಮೌಲ್ಯದ ಸ್ಮಾರ್ಟ್‌ಫೋನ್ ಡ್ಯಾಮ್ ನೀರಿನಲ್ಲಿ ಬಿದ್ದಿತ್ತು.  ನೀರಿನಲ್ಲಿ ಬಿದ್ದು ಕಳೆದುಹೋದ ತಮ್ಮ ಮೊಬೈಲ್ ಹುಡುಕಲು ಅಧಿಕಾರಿ ಡ್ಯಾಮ್ ನಲ್ಲಿ ಸಂಗ್ರಹವಾಗಿದ್ದ ಸುಮಾರು 41 ಲಕ್ಷ ನೀರನ್ನು ಪಂಪ್ ಗಳ ಮೂಲಕ ಹೊರಗೆ ಹಾಕಿದ್ದರು. ಇದೀಗ ಈ ಕೃತ್ಯಕ್ಕೆ ನೆರವು ನೀಡಿದ ಆರೋಪದ ಮೇರೆಗೆ ಹಿರಿಯ ಅಧಿಕಾರಿಯೊಬ್ಬರಿಗೆ 53 ಸಾವಿರ ರೂ ದಂಡ ವಿಧಿಸಲಾಗಿದೆ.

ಇಂದ್ರಾವತಿ ಯೋಜನೆಯ ಅಧೀಕ್ಷಕ ಅಭಿಯಂತರರು ಮೇ 26ರಂದು ಉಪವಿಭಾಗಾಧಿಕಾರಿ ಆರ್.ಕೆ.ಧಿವರ್ ಅವರಿಗೆ ಪತ್ರ ಬರೆದು, ವ್ಯರ್ಥವಾಗುವ ನೀರಿನ ವೆಚ್ಚವನ್ನು ನೀರು ಪೋಲು ಮಾಡಲು ಅನುಮತಿ ನೀಡಿದ ಅಧಿಕಾರಿಯ ಸಂಬಳದಿಂದ ಏಕೆ ವಸೂಲಿ ಮಾಡಬಾರದು ಎಂದು ಕೇಳಿದ್ದಾರೆ. ಅಲ್ಲದೆ ಬೇಸಿಗೆಯಲ್ಲಿ ನೀರಾವರಿ ಮತ್ತಿತರ ಉದ್ದೇಶಗಳಿಗಾಗಿ ಎಲ್ಲ ಜಲಾಶಯಗಳಲ್ಲಿ ನೀರಿನ ಅಗತ್ಯವಿದೆ ಈ ಬಗ್ಗೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಇನ್ನು ಈ ಕೃತ್ಯದ ಪ್ರಮುಖ ಪಾತ್ರದಾರಿ ಆಹಾರ ಇಲಾಖೆ ಅಧಿಕಾರಿ ರಾಜೇಶ್ ಬಿಸ್ವಾಸ್ ರನ್ನು ಈಗಾಗಲೇ ಛತ್ತೀಸ್ ಘಡ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ. ಇದೀಗ ಪ್ರಕರಣದ 2ನೇ ಆರೋಪಿ ಅಧಿಕಾರಿಗೆ ದುಬಾರಿ ದಂಡ ವಿಧಿಸಿದೆ.

ಏನಿದು ಘಟನೆ?
ಛತ್ತೀಸ್ ಘಡದ ಕೊಯಿಲೀಬೇಡಾದ ಕಂಕೇರ ಜಿಲ್ಲೆಯ ಆಹಾರ ವಿಭಾಗದ ಅಧಿಕಾರಿ ರಾಜೇಶ್​ ಬಿಸ್ವಾಸ್ ರಜೆ ಮಜ ಅನುಭವಿಸಲು ಸ್ನೇಹಿತರೊಂದಿಗೆ ಕಂಕೇರ್ ಜಿಲ್ಲೆಯ ಪರ್ಲಾಕೋಟ್ ಅಣೆಕಟ್ಟೆಗೆ ತೆರಳಿದ್ದರು. ಈ ವೇಳೆ ಬಿಸ್ವಾಸ್ ತನ್ನ ದುಬಾರಿ ಸುಮಾರು 1 ಲಕ್ಷ ರೂ ಮೌಲ್ಯದ ಮೊಬೈಲ್ ತೆಗೆದು ಸೆಲ್ಫಿ ತೆಗೆದುಕೊಳ್ಳುವಾಗ ಫೋನ್ ಕೈಜಾರಿ ಡ್ಯಾಮ್ ನೀರಿಗೆ ಬಿದ್ದಿತ್ತು. ಪರಿಣಾಮ ಅದನ್ನು ಮರಳಿ ಪಡೆಯುವ ಪ್ರಯತ್ನವಾಗಿ ಅಧಿಕಾರಿ ಬಿಸ್ವಾಸ್ ಜಲಾಶಯದಲ್ಲಿನ ಬರೊಬ್ಬರಿ 41 ಲಕ್ಷ ಲೀಟರ್ ನೀರನ್ನು ಪೋಲು ಮಾಡಿದ್ದಾರೆ. ಅಧಿಕಾರಿಯ ಈ ಬೇಜಾವಾಬ್ದಾರಿ ತನದಿಂದಾಗಿ ಬೇಸಿಗೆಯ ಈ ದಿನಗಳಲ್ಲಿ ನೀರಿನ ಕೊರತೆ ಉಂಟಾಗಲಿದೆ ಎಂಬ ಆತಂಕ ಸ್ಥಳೀಯರಲ್ಲಿ ನಿರ್ಮಾಣವಾಗಿದೆ.

ಅಧಿಕಾರಿಗಳನ್ನು ಕೇಳಿಯೇ ನೀರು ಬಿಟ್ಟಿದ್ದು: ರಾಜೇಶ್
ಇನ್ನು ಘಟನೆ ಕುರಿತು ಸ್ಪಷ್ಟನೆ ನೀಡಿರುವ ಅಧಿಕಾರಿ ರಾಜೇಶ್ ಬಿಸ್ವಾಸ್​, ‘ಹತ್ತಿರದ ನಾಲೆಗೆ ನೀರನ್ನು ಹರಿಬಿಟ್ಟು ನನ್ನ ಫೋನ್​ನ್ನು ಹುಡುಕಬೇಕೆಂದುಕೊಂಡಿದ್ದೇನೆ ಎಂದು ಮೌಖಿಕವಾಗಿ ಸ್ಥಳೀಯ ಉಪವಿಭಾಗಾಧಿಕಾರಿಗಳ ಬಳಿ ಕೇಳಿಕೊಂಡೆ. ಆಗ ಅವರು, ಮೂರರಿಂದ ನಾಲ್ಕು ಅಡಿ ನೀರನ್ನು ಜಲಾಶಯದಿಂದ ಹರಿಬಿಟ್ಟರೆ ಸ್ಥಳೀಯ ರೈತರಿಗೂ ಪ್ರಯೋಜನವಾಗಬಹುದು ಆಗಲಿ ಎಂದು ಅನುಮತಿ ನೀಡಿದರು. ನಂತರ ಸ್ಥಳೀಯರ ಸಹಾಯದಿಂದ ಜಲಾಶಯದೊಳಗೆ ಬಿದ್ದ ಮೊಬೈಲ್​ ಅನ್ನು ಮರಳಿ ಪಡೆದುಕೊಂಡೆ’ ಎಂದು ಸ್ಪಷ್ಟನೆ ನೀಡಿದ್ದಾರೆ​.

ಆದರೆ ಜಲಸಂಪನ್ಮೂಲ ಇಲಾಖೆಯ ಉಪವಿಭಾಗಾಧಿಕಾರಿ ಆರ್‌ಸಿ ಧಿವರ್ ಅವರು ಗರಿಷ್ಠ ಐದು ಅಡಿ ಆಳದವರಗೆ ಮಾತ್ರ ನೀರು ಬಿಡಲು ಮೌಖಿಕ ಅನುಮತಿ ನೀಡಿದ್ದರು ಎಂದು ಹೇಳಲಾಗಿದೆ. ಆರಂಭದಲ್ಲಿ ಸ್ಥಳೀಯ ನಿವಾಸಿಗಳು ನೀರಿಗೆ ಧುಮುಕಿ ಮೊಬೈಲ್​ ಅನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ನೀರಿನಾಳ ಹೆಚ್ಚಿದುದರಿಂದ ಪ್ರಯತ್ನ ವಿಫಲವಾಗಿದೆ. ಆಗ ಈ ಅಧಿಕಾರಿ ತನ್ನ ಫೋನ್​ ಅನ್ನು ಮರಳಿ ಪಡೆಯಲೇಬೇಕು ಎಂಬ ಜಿದ್ದಿಗೆ ಬಿದ್ದು ಇಂಥ ಅರ್ಥಹೀನ ಆಲೋಚನೆಯನ್ನು ಕಾರ್ಯಗತಗೊಳಿಸಿದ್ದಾರೆ. ಸತತ ಮೂರು ದಿನಗಳ ಕಾಲ ಎರಡು 30hp ಡೀಸಲ್​ ಪಂಪ್​ಗಳ ಸಹಾಯದಿಂದ ನೀರುಹರಿಬಿಡುವಿಕೆಯ ಕಾರ್ಯಾಚರಣೆಯನ್ನು ನಡೆಸಲಾಗಿದೆ.

ವಿಷಯ ತಿಳಿದ ನಂತರ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಪಂಪ್​ಗಳನ್ನು ಸ್ಥಗಿತಗೊಳಿಸಿದ್ದಾರಾದರೂ 41 ಲಕ್ಷ ಲೀಟರಿಗೂ ಹೆಚ್ಚು ನೀರು ಪೋಲಾಗಿದೆ. ಇಷ್ಟು ಪ್ರಮಾಣ ನೀರನ್ನು  1,500 ಎಕರೆ ಕೃಷಿ ಭೂಮಿಗೆ  ಬಳಕೆ ಮಾಡಬಹುದಾಗಿತ್ತು ಎಂದು ತಜ್ಞರು ಹೇಳಿದ್ದಾರೆ. ರಾಜೇಶ್ ಬಿಸ್ವಾಸ್  ಅವರ ಈ ನಡೆಯಿಂದ ಈ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಬಹುದೆಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಏಕೆಂದರೆ ಬೇಸಿಗೆಕಾಲದಲ್ಲಿ ಇಲ್ಲಿನ ಜನ ಟ್ಯಾಂಕರ್​ಗಳ ಮೇಲೆ ಅವಲಂಬಿತರಾಗಿರುತ್ತಾರೆ. 

ಮಾಡಿದ ತಪ್ಪಿಗೆ ತಕ್ಕಪಾಠ
ಇನ್ನು ಬೇಸಿಗೆ ಅವಧಿಯಲ್ಲಿ ನೀರಿನ ಬೃಹತ್ ಪೋಲು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕೇರ್ ಕಲೆಕ್ಟರ್ ಪ್ರಿಯಾಂಕಾ ಶುಕ್ಲಾ ಅವರು ಶುಕ್ರವಾರ ವಿಶ್ವಾಸ್ ಅವರನ್ನು ಅಮಾನತುಗೊಳಿಸಿದ್ದಾರೆ. ಅಮಾನತು ಆದೇಶದಲ್ಲಿ ವಿಶ್ವಾಸ್ ಅವರು ತಮ್ಮ ಮೊಬೈಲ್ ಫೋನ್ ಅನ್ನು ಹುಡುಕಲು ಅನುಮತಿಯಿಲ್ಲದೆ ಜಲಾಶಯದಿಂದ 41,104 ಕ್ಯೂಬಿಕ್ ಮೀಟರ್ ನೀರನ್ನು ಹರಿಸಿದ್ದಾರೆ ಮತ್ತು ಇದು ಅವರ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com