ಮರಾಠಾ ಮೀಸಲಾತಿ ಕಿಚ್ಚು: ಬೀಡ್ ಪ್ರದೇಶದಲ್ಲಿ 99 ಮಂದಿ ಬಂಧನ, ಸಚಿವರ ಕಾರು ಧ್ವಂಸ, ಸರ್ವಪಕ್ಷ ಸಭೆ ನಡೆಸಿದ ಸಿಎಂ ಶಿಂಧೆ

ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಗಳಿಗೆ ಮೀಸಲಾತಿ ಪ್ರತಿಭಟನೆ ಬುಧವಾರ ಹಿಂಸಾತ್ಮಕ ತಿರುವು ಪಡೆದುಕೊಂಡಿದ್ದು, ಇದರಿಂದಾಗಿ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಅಂತರ್ಜಾಲ ಮತ್ತು ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ.
ಮರಾಠ ಮೀಸಲಾತಿ ಪರ ಪ್ರತಿಭಟನಾಕಾರರು ಬೀಡ್‌ನಲ್ಲಿರುವ ಎನ್ ಸಿಪಿ ಕಚೇರಿಗೆ ಬೆಂಕಿ ಹಚ್ಚಿರುವ ಚಿತ್ರ(ಫೋಟೋ ಕೃಪೆ ಎಎನ್ಐ ಸುದ್ದಿಸಂಸ್ಥೆ)
ಮರಾಠ ಮೀಸಲಾತಿ ಪರ ಪ್ರತಿಭಟನಾಕಾರರು ಬೀಡ್‌ನಲ್ಲಿರುವ ಎನ್ ಸಿಪಿ ಕಚೇರಿಗೆ ಬೆಂಕಿ ಹಚ್ಚಿರುವ ಚಿತ್ರ(ಫೋಟೋ ಕೃಪೆ ಎಎನ್ಐ ಸುದ್ದಿಸಂಸ್ಥೆ)

ಮುಂಬೈ: ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಗಳಿಗೆ ಮೀಸಲಾತಿ ಪ್ರತಿಭಟನೆ ಬುಧವಾರ ಹಿಂಸಾತ್ಮಕ ತಿರುವು ಪಡೆದುಕೊಂಡಿದ್ದು, ಇದರಿಂದಾಗಿ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಅಂತರ್ಜಾಲ ಮತ್ತು ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ.

ಮರಾಠಾ ಮೀಸಲಾತಿ ಬೇಡಿಕೆಗೆ ಮರಾಠ ಸಮುದಾಯದ ಜನರು ಹಿಂಸಾತ್ಮಕ ಧೋರಣೆ ಅನುಸರಿಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಸಚಿವ ಮತ್ತು ಅಜಿತ್ ಪವಾರ್ ಗುಂಪಿನ ನಾಯಕ ಹಸನ್ ಮುಶ್ರಿಫ್ ಅವರ ಕಾರನ್ನು ಧ್ವಂಸಗೊಳಿಸಲಾಗಿದೆ. ಮುಂಬೈನ ಕೊಲಾಬಾದಲ್ಲಿರುವ ಶಾಸಕರ ನಿವಾಸದ ಬಳಿ ಇಬ್ಬರು ಅಪರಿಚಿತರು ಈ ದಾಳಿ ನಡೆಸಿದ್ದಾರೆ.

ಆರೋಪಿಗಳು ವಶಕ್ಕೆ: ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮರಾಠಾ ಸಮುದಾಯದ ಜನರು ಮರಾಠಾ ಮೀಸಲಾತಿ ವಿಚಾರವಾಗಿ ಮುಖಂಡರನ್ನೇ ಟಾರ್ಗೆಟ್ ಮಾಡುತ್ತಿರುವುದು ಗಮನಾರ್ಹ. ಹೀಗಾಗಿ ಇದೀಗ ಮುಖ್ಯಮಂತ್ರಿ ಸೇರಿದಂತೆ ಮುಖಂಡರು ಹಾಗೂ ಸಚಿವರ ನಿವಾಸಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮೀಸಲಾತಿ ವಿಚಾರವಾಗಿ ಚರ್ಚಿಸಲು ಮಹಾರಾಷ್ಟ್ರ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಎಂದೂ ಮನೋಜ್ ಒತ್ತಾಯಿಸಿದ್ದರು. ಜಾರಂಜ್​​​​​ಗೆ ರಾಜ್ ಠಾಕ್ರೆಗೆ ಬರೆದ ಪತ್ರದಲ್ಲಿ ಮೀಸಲಾತಿಯ ಲಾಭವನ್ನು ಪಡೆಯಲಾಗದವರು ಅದನ್ನು ಪಡೆಯಬೇಕು ಮತ್ತು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂದು ಹೇಳಿದ್ದಾರೆ. ರಾಜ್ ಠಾಕ್ರೆ ಈ ವಿಷಯದ ಬಗ್ಗೆ ಚರ್ಚಿಸಲು ಸರ್ಕಾರ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು. ವಿಭಿನ್ನ ಅಭಿಪ್ರಾಯಗಳು ಯಾವುವು ಮತ್ತು ಯಾವ ಕಾನೂನಿನ ಅಡಿಯಲ್ಲಿ ಸರ್ಕಾರವು ಮೀಸಲಾತಿ ನೀಡಲು ಯೋಜಿಸುತ್ತಿದೆ ಎಂಬುದನ್ನು ಎಲ್ಲರಿಗೂ ತಿಳಿಸಿ ಎಂದಿದ್ದಾರೆ.

ಸರ್ವಪಕ್ಷ ಸಭೆ ಕರೆದ ಸಿಎಂ ಶಿಂಧೆ: ಸಿಎಂ ಏಕನಾಥ್ ಶಿಂಧೆ ಅವರು ಸರ್ವಪಕ್ಷ ಸಭೆ ಕರೆದು ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ. ಪರಿಸ್ಥಿತಿಯನ್ನು ಎದುರಿಸಲು ಮತ್ತು ಅವರ ಬೆಂಬಲವನ್ನು ಪಡೆಯಲು ಸರ್ಕಾರದ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳು ಪ್ರತಿಪಕ್ಷ ನಾಯಕರಿಗೆ ಮನವರಿಕೆ ಮಾಡುತ್ತಿದ್ದಾರೆ. 

ಹಿಂಸಾಚಾರದ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ಬೀಡ್, ಧಾರಶಿವ್ ಮತ್ತು ಜಲ್ನಾ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮರಾಠಾ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮರಾಠಾ ಮೀಸಲಾತಿಗೆ ಆಗ್ರಹಿಸುತ್ತಿರುವ ಹೋರಾಟಗಾರ ಮನೋಜ್ ಜಾರಂಗೆ ಅವರಿಗೆ ಸಿಎಂ ಏಕನಾಥ ಶಿಂಧೆ ಭರವಸೆ ನೀಡಿದರು ಮತ್ತು ಶಾಂತಿಗಾಗಿ ಕಾಪಾಡುವಂತೆ ಮನವಿ ಮಾಡಿದರು. ಇದೇ ವೇಳೆ ಕಳೆದ ಕೆಲ ದಿನಗಳಿಂದ ನಡೆದ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿರುವ 50ರಿಂದ 55 ಮಂದಿಯನ್ನು ರಾಜ್ಯ ಸರಕಾರ ಗುರುತಿಸಿದೆ.

ಬೀಡ್ ನಲ್ಲಿ 99 ಮಂದಿ ಬಂಧನ: ಬೀಡ್ ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 99 ಜನರನ್ನು ಬಂಧಿಸಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಹಾರಾಷ್ಟ್ರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಸಂಜಯ್ ಸಕ್ಸೇನಾ ತಿಳಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸಲು ಬೀಡ್ ಜಿಲ್ಲೆಗೆ ಭೇಟಿ ನೀಡಿದ್ದಾರೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬೀಡ್ ಪೊಲೀಸರು 30 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ಸೋಮವಾರ ಹಿಂಸಾಚಾರದ ನಂತರ ಮಧ್ಯ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್ ಗುಂಪು) ಶಾಸಕ ಪ್ರಕಾಶ್ ಸೋಲಂಕೆ ಅವರ ಬೀಡಿನ ಮಜಲಗಾಂವ್ ಪಟ್ಟಣದಲ್ಲಿರುವ ನಿವಾಸಕ್ಕೆ ಸೋಮವಾರ ಬೆಳಗ್ಗೆ ಕೋಟಾ ಚಳವಳಿಗಾರರ ಗುಂಪೊಂದು ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದೆ. ಮರಾಠ ಕೋಟಾ ಆಂದೋಲನದ ಬಗ್ಗೆ ಅವರು ಉದ್ದೇಶಿಸಿ ಮಾತನಾಡಿರುವ ಶಾಸಕರ ಆಡಿಯೊ ಕ್ಲಿಪ್ ಮತ್ತು ಅನಿರ್ದಿಷ್ಟಾವಧಿ ಉಪವಾಸದಲ್ಲಿರುವ ಕೋಟಾ ಕಾರ್ಯಕರ್ತ ಮನೋಜ್ ಜಾರಂಜ್ ಅವರ ಬಗ್ಗೆ ಹೇಳಿಕೆ ನೀಡಿದ ನಂತರ ಗುಂಪು ಅವರ ನಿವಾಸದಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದೆ.

ನಂತರ, ಪ್ರತಿಭಟನಾಕಾರರು ಮಜಲಗಾಂವ್ ಮುನ್ಸಿಪಲ್ ಕೌನ್ಸಿಲ್ ಕಟ್ಟಡದ ಮೊದಲ ಮಹಡಿಗೆ ಬೆಂಕಿ ಹಚ್ಚಿದರು. ಸೋಮವಾರ ಸಂಜೆ ಬೀಡ್ ನಗರದ ಎನ್‌ಸಿಪಿ ಶಾಸಕ ಸಂದೀಪ್ ಕ್ಷೀರಸಾಗರ್ ಅವರ ವಸತಿ ಆವರಣ ಮತ್ತು ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರ ಗುಂಪು ಸೋಮವಾರ ಸಂಜೆ ಬೆಂಕಿ ಹಚ್ಚಿತು. ಬೀಡ್‌ನಲ್ಲಿರುವ ಮಹಾರಾಷ್ಟ್ರದ ಮಾಜಿ ಸಚಿವ ಜಯದತ್ ಕ್ಷೀರಸಾಗರ್ ಅವರ ನಿವಾಸಕ್ಕೂ ಬೆಂಕಿ ಹಚ್ಚಲಾಗಿದೆ.

ಎನ್‌ಸಿಪಿ ನಾಯಕ ಅಮರಸಿಂಗ್ ಪಂಡಿತ್ ಅವರ ನಿವಾಸದ ಹೊರಗೆ ಜಮಾಯಿಸಿದ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು.

ಮುಂಬೈಯಲ್ಲಿ ಸಚಿವರ ಕಾರು ಧ್ವಂಸ: ಮೀಸಲಾತಿಗಾಗಿ ಹೋರಾಡುತ್ತಿರುವವರು ಮಹಾರಾಷ್ಟ್ರ ಸಚಿವ ಹಸನ್ ಮುಶ್ರಿಫ್ ಅವರ ಎಸ್ ಯುವಿ ಕಾರನ್ನು ಧ್ವಂಸಗೊಳಿಸಿದ್ದಾರೆ. ಈ ಸಂಬಂಧ ಮೂವರನ್ನು ಮರೈನ್ ಡ್ರೈವ್ ಪೊಲೀಸರು ಬಂಧಿಸಿದ್ದಾರೆ. ಮುಶ್ರೀಫ್ ಅವರು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಬಣಕ್ಕೆ ಸೇರಿದವರು.
ಬೆಳಗ್ಗೆ 7.30ರ ಸುಮಾರಿಗೆ ಇಬ್ಬರು ಮರಾಠ ಕೋಟಾ ಕಾರ್ಯಕರ್ತರು ದಕ್ಷಿಣ ಮುಂಬೈನ ಆಕಾಶವಾಣಿ ಎಂಎಲ್‌ಎ ಹಾಸ್ಟೆಲ್ ಬಳಿ ನಿಲ್ಲಿಸಿದ್ದ ಸಚಿವರ ಎಸ್‌ಯುವಿ (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಮೇಲೆ ದಾಳಿ ನಡೆಸಿದರು. ವಾಹನದ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನಾಕಾರರು ‘ಏಕ್ ಮರಾಠಾ, ಲಕ್ಷ ಮರಾಠಾ’ ಎಂಬ ಘೋಷಣೆ ಕೂಗುತ್ತಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಈ ವ್ಯಕ್ತಿಗಳು ಛತ್ರಪತಿ ಸಂಭಾಜಿನಗರ ಜಿಲ್ಲೆಯವರು ಎಂಬುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಘಟನೆಯ ಹೆಚ್ಚಿನ ತನಿಖೆಗಾಗಿ ಹಾನಿಗೊಳಗಾದ ವಾಹನವನ್ನು ಮರೈನ್ ಡ್ರೈವ್ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ. ಮರಾಠಾ ಮೀಸಲಾತಿಯ ಬೇಡಿಕೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹಿಂಸಾತ್ಮಕ ಘಟನೆಗಳ ನಂತರ, ಮುಂಬೈ ಪೊಲೀಸರು ಕ್ಯಾಬಿನೆಟ್ ಸಚಿವರು, ರಾಜಕೀಯ ನಾಯಕರು, ರಾಜಕೀಯ ಪಕ್ಷಗಳ ಕಚೇರಿಗಳು ಮತ್ತು ಮಹಾನಗರದ ಪ್ರಮುಖ ಸ್ಥಳಗಳ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com