ಲಖನೌ: ಪತ್ನಿಯನ್ನು ಇಬ್ಬರು ಮಕ್ಕಳ ಎದುರೇ ಚಾಕುವಿನಿಂದ ಇರಿದು ಕೊಂದ 46 ವರ್ಷದ ವ್ಯಕ್ತಿಯೊಬ್ಬ ನಂತರ ಅಪಾರ್ಟ್ ಮೆಂಟ್ ವೊಂದರ ಮೊದಲ ಅಂತಸ್ತಿನ ಬಾಲ್ಕನಿಯಿಂದ ಜಿಗಿದಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.
ಘಟನೆಯಲ್ಲಿ ಪತ್ನಿ ಶಿವಾನಿ ಕಪೂರ್ (43) ಅವರನ್ನು 13 ಮತ್ತು 12 ವರ್ಷದ ಇಬ್ಬರು ಮಕ್ಕಳ ಸಮ್ಮುಖದಲ್ಲಿ ಚಾಕುವಿನಿಂದ ಇರಿದು ಕೊಂದ ಆರೋಪಿ ಪತಿಗೆ ಗಾಯಗಳಾಗಿದ್ದು, ಪ್ರಸ್ತುತ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಟ್ರಾಮಾ ಸೆಂಟರ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಾನಿ ಕಪೂರ್ ಮತ್ತು ಆದಿತ್ಯ ಕಪೂರ್ ಮದುವೆಯಾಗಿ 14 ವರ್ಷಗಳಾಗಿದ್ದು, ಇತ್ತೀಚಿಗೆ ಅವರ ಸಂಬಂಧದಲ್ಲಿ ಬಿರುಕು ಮೂಡಿತ್ತು, ಸುಮಾರು ಆರು ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಲಖನೌದ ಸೆಂಟ್ರಲ್ ಉಪ ಪೊಲೀಸ್ ಆಯುಕ್ತ ಅಪರ್ಣಾ ರಜತ್ ಕೌಶಿಕ್ ತಿಳಿಸಿದ್ದಾರೆ.
ಶಿವಾನಿ ಮತ್ತು ಅವರ ಇಬ್ಬರು ಮಕ್ಕಳು ಆಲ್ಯಾ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರೆ, ಆದಿತ್ಯ ಮಹಾನಗರದ ಮತ್ತೊಂದು ಮನೆಯಲ್ಲಿ ವಾಸಿಸುತ್ತಿದ್ದರು. ಕುಡಿದ ಅಮಲಿನಲ್ಲಿದ್ದ ಆದಿತ್ಯ ತನ್ನ ಪತ್ನಿಯ ಫ್ಲಾಟ್‌ಗೆ ಬಂದಾಗ ಈ ಘಟನೆ ನಡೆದಿದೆ. ಆರಂಭದಲ್ಲಿ, ಶಿವಾನಿ ಬಾಗಿಲು ತೆರೆಯಲು ನಿರಾಕರಿಸಿದ್ದಾಳೆ. ಆದರೆ ಆದಿತ್ಯ ತಮ್ಮ ಮಕ್ಕಳನ್ನು ನೋಡಬೇಕೆಂದು ಕಿರುಚಲು ಪ್ರಾರಂಭಿಸಿದಾಗ ಆಕೆ ಅಂತಿಮ ಬಾಗಿಲು ತೆರೆದಿದ್ದಾಳೆ. ಮಾತಿನ ಚಕಮಕಿ ನಡೆದು ಆದಿತ್ಯ ಕೋಪದ ಭರದಲ್ಲಿ ಅಡುಗೆ ಚಾಕುವಿನಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಆದಿತ್ಯ ಮೊದಲ ಮಹಡಿಯ ಬಾಲ್ಕನಿಯಿಂದ ಜಿಗಿದು ತಲೆಗೆ ಪೆಟ್ಟಾಗುವ ಮೊದಲು ತಮ್ಮ ತಾಯಿಗೆ ಅನೇಕ ಬಾರಿ ಇರಿದಿರುವುದನ್ನು ಮಕ್ಕಳು ನೋಡಿದ್ದಾರೆ. ಅಪಾರ್ಟ್‌ಮೆಂಟ್ ಸಮುಚ್ಚಯದ ಇತರ ನಿವಾಸಿಗಳು ಮತ್ತು ಭದ್ರತಾ ಸಿಬ್ಬಂದಿ ಆರೋಪಿಯನ್ನು ಹಿಡಿದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಡೈನಿಂಗ್ ಟೇಬಲ್ ಮೇಲೆ ಶಿವಾನಿಯ ಮೃತದೇಹವನ್ನು ಗುರುತಿಸಿದ್ದಾರೆ. ತರುವಾಯ, ಆದಿತ್ಯನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದು, ಶಿವಾನಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
Advertisement