ಮಾಜಿ ಸೈನಿಕನಿಗೆ ಗುಂಡಿಕ್ಕಿ ಹತ್ಯೆ: ಇಬ್ಬರು ಶಸ್ತ್ರಸಜ್ಜಿತ ದಾಳಿಕೋರರನ್ನು ಹೊಡೆದು ಕೊಂದ ಜನ!
ಪಾಟ್ನಾ: ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಮಾಜಿ ಸೈನಿಕನಿಗೆ ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರನೇ ಆಪಾದಿತ ದಾಳಿಕೋರನನ್ನು ಸಹ ತೀವ್ರವಾಗಿ ಥಳಿಸಲಾಗಿದೆ. ಸದ್ಯ ಆತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಮೃತರನ್ನು ಮಾಜಿ ಸೈನಿಕ ಬಿಜೇಂದ್ರ ಸಿಂಗ್ (55) ಎಂದು ಗುರುತಿಸಲಾಗಿದೆ. ಜನರ ಗುಂಪಿನಿಂದ ಹತ್ಯೆಗೀಡಾದ ಇಬ್ಬರನ್ನು ಮಿಥಿಲೇಶ್ ಕುಮಾರ್ (23) ಮತ್ತು ಆದಿತ್ಯ ಕುಮಾರ್ (25) ಎಂದು ಗುರುತಿಸಲಾಗಿದೆ. ಮೂರನೇ ದಾಳಿಕೋರನನ್ನು ಅಜಿತ್ ಕುಮಾರ್ ಎಂದು ಗುರುತಿಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಕುಮಾರ್ ಮಾತನಾಡಿ, 'ಬೆಳಿಗ್ಗೆ 9.45ರ ಸುಮಾರಿಗೆ ಕಲ್ಯಾಣಿ ಗ್ರಾಮದ ಬಳಿ ಘಟನೆ ನಡೆದಿದ್ದು, ಮೂವರು ಬೈಕ್‌ನಲ್ಲಿ ಬಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ನಿವೃತ್ತ ಸೇನಾ ಯೋಧ ಬಿಜೇಂದ್ರ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗುತ್ತಿದ್ದರು' ಎಂದಿದ್ದಾರೆ.
ಈ ವೇಳೆ ಸ್ಥಳೀಯ ನಿವಾಸಿಗಳು ಮೂವರು ದಾಳಿಕೋರರನ್ನು ಹಿಂಬಾಲಿಸಿ, ಅವರಿಗೆ ಥಳಿಸಿದ್ದಾರೆ. ಈ ವೇಳೆ ಗ್ರಾಮದ ಅಂಕಿತ್ ಕುಮಾರ್ ಎಂಬುವವರ ಮೇಲೆ ಗುಂಡು ಹಾರಿಸಲಾಗಿದ್ದು, ಅವರು ಗಾಯಗೊಂಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ ಎಂದು ತಿಳಿಸಿದರು.
ಬಿಜೇಂದ್ರ ಸಿಂಗ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮಾಜಿ ಸೈನಿಕನ ಹತ್ಯೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ. ಹತ್ಯೆಯ ಹಿಂದಿನ ಕಾರಣ ತಿಳಿಯಲು ಮತ್ತು ಗುಂಪು ಹತ್ಯೆ ಬಗ್ಗೆ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ