ನವದೆಹಲಿ: ಯೋಗ ಗುರು ರಾಮ್‌ದೇವ್ ಸಹ-ಸ್ಥಾಪಿತವಾದ ಪತಂಜಲಿ ಆಯುರ್ವೇದ ಕಂಪನಿಯು ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುವ ಕುರಿತು ಜಾಹೀರಾತುಗಳಲ್ಲಿ ಸುಳ್ಳು ಮತ್ತು ದಾರಿ ತಪ್ಪಿಸುವ ಜಾಹೀರಾತುಗಳನ್ನು ನೀಡದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಎಚ್ಚರಿಸಿದೆ.
ಅಲೋಪತಿ ಔಷಧಿಗಳನ್ನು ಗುರಿಯಾಗಿಸಿಕೊಂಡು ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಬಾಬಾ ರಾಮ್ ದೇವ್ ಒಡೆತನದ ಪತಂಜಲಿ ಆಯುರ್ವೇದ ಕಂಪನಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
ಜನರ ದಾರಿ ತಪ್ಪಿಸುವ ನಿಮ್ಮ ಎಲ್ಲಾ ಜಾಹೀರಾತುಗಳನ್ನು ಈ ಕೂಡಲೇ ನಿಲ್ಲಿಸಬೇಕು. ಇದನ್ನು ಕೋರ್ಟ್ ತುಂಬಾ ಗಂಭೀರವಾಗಿ ಪರಿಗಣಿಸಲಿದೆ. ನಿಮ್ಮ ಪ್ರಾಡಕ್ಟ್ಗಳು ಕೆಲವು ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಸುಳ್ಳು ಹೇಳಿದ್ರೆ ಪ್ರತಿ ಉತ್ಪನ್ನಗಳ ಮೇಲೆ ಬರೋಬ್ಬರಿ ಒಂದು ಕೋಟಿ ದಂಡ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ವಾರ್ನಿಂಗ್ ಮಾಡಿದೆ. ಜೊತೆಗೆ ಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಪಂತಜಲಿ ಸುಳ್ಳು ಜಾಹೀರಾತುಗಳನ್ನು ನೀಡಿ ಜನರ ದಾರಿ ತಪ್ಪಿಸುತ್ತಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ದೂರು ದಾಖಲಿಸಿತ್ತು. ಪಂತಂಜಲಿ ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳನ್ನು ಎಲ್ಲಿಯೂ ಪರಿಶೀಲನೆ ಮಾಡಿಲ್ಲ. ಡ್ರಗ್ಸ್ ಅಂಡ್ ಅದರ್ ಮ್ಯಾಜಿಕ್ ರೆಮೆಡಿಸ್ ಆ್ಯಕ್ಟ್-1954 ಮತ್ತು ಕನ್ಸುಮರ್ ಪ್ರೊಟೆಕ್ಷನ್ ಆ್ಯಕ್ಟ್-2019ರ ಪ್ರಕಾರ ಇದು ಅಪರಾಧ ಎಂದು ಐಎಂಎ ವಾದಿಸಿದೆ.
ವಿಚಾರಣೆಯ ಸಂದರ್ಭದಲ್ಲಿ, ಪೀಠವು ಪತಂಜಲಿ ಆಯುರ್ವೇದ್‌ಗೆ ಆಧುನಿಕ ವೈದ್ಯಕೀಯ ವ್ಯವಸ್ಥೆಗಳ ವಿರುದ್ಧ ತಪ್ಪುದಾರಿಗೆಳೆಯುವ ಹಕ್ಕುಗಳು ಮತ್ತು ಜಾಹೀರಾತುಗಳನ್ನು ಪ್ರಕಟಿಸದಂತೆ ಹೇಳಿದೆ. ಒಂದು ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸಬಹುದು ಎಂದು ಸುಳ್ಳು ಹೇಳಿಕೆ ನೀಡಿದರೆ ಪ್ರತಿ ಉತ್ಪನ್ನಕ್ಕೆ 1 ಕೋಟಿ ರೂ ದಂಡ ವಿಧಿಸಲು ಪೀಠವು ಪರಿಗಣಿಸಬಹುದು ಎಂದು ಹೇಳಿದೆ.ಕೆಲವು ಖಾಯಿಲೆಗಳಿಗೆ ಪರಿಪೂರ್ಣ ಚಿಕಿತ್ಸೆ ನೀಡುವ ಔಷಧಗಳ ಬಗ್ಗೆ ಹೇಳಿಕೊಳ್ಳಲಾಗುತ್ತಿರುವ ತಪ್ಪು ವೈದ್ಯಕೀಯ ಜಾಹೀರಾತುಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರದ ಪರ ಹಾಜರಾದ ವಕೀಲರನ್ನು ಸುಪ್ರೀಂ ಕೋರ್ಟ್ ಕೇಳಿದೆ.
Advertisement