ನಾರಾಯಣಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಕಬ್ಬಿಣದ ಅದಿರು ಗಣಿ ಪ್ರದೇಶದಲ್ಲಿ ಶುಕ್ರವಾರ ನಕ್ಸಲೀಯರು ಅಳವಡಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ರಾಯ್‌ಪುರದಿಂದ ಸುಮಾರು 350 ಕಿಮೀ ದೂರದಲ್ಲಿರುವ ಛೋಟೆ ಡೊಂಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಬೆಟ್ಟದ ಮೇಲಿರುವ ಅಮ್‌ದೈ ಘಾಟಿ ಕಬ್ಬಿಣದ ಅದಿರು ಗಣಿಯಲ್ಲಿ ಮೂವರು ಕಾರ್ಮಿಕರು ಕೆಲಸಕ್ಕೆ ತೆರಳುತ್ತಿದ್ದಾಗ ಬೆಳಗ್ಗೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೈಸ್ವಾಲ್ ನೆಕೋ ಇಂಡಸ್ಟ್ರೀಸ್ ಲಿಮಿಟೆಡ್ (ಜೆಎನ್‌ಐಎಲ್) ಗೆ ಆಮ್ದೈ ಘಾಟಿಯಲ್ಲಿ ಕಬ್ಬಿಣದ ಅದಿರು ಗಣಿ ಮಂಜೂರು ಮಾಡಲಾಗಿದ್ದು, ನಕ್ಸಲೀಯರು ಈ ಯೋಜನೆಯನ್ನು ದೀರ್ಘಕಾಲದಿಂದಲೂ ವಿರೋಧಿಸುತ್ತಿದ್ದಾರೆ.
ಕಾರ್ಮಿಕರು ನಕ್ಸಲರು ಅಳವಡಿಸಿದ್ದ ಐಇಡಿ ಸಂಪರ್ಕಕ್ಕೆ ಬಂದಾಗ ಸ್ಫೋಟ ಸಂಭವಿಸಿದೆ ಎಂದು ಅವರು ಹೇಳಿದರು.
ಮೃತರನ್ನು ನಾರಾಯಣಪುರ ಜಿಲ್ಲೆಯ ನಿವಾಸಿಗಳಾದ ರಿತೇಶ್ ಗಗ್ಡಾ (21) ಮತ್ತು ಶ್ರವಣ್ ಗಗ್ಡಾ (24) ಎಂದು ಗುರುತಿಸಲಾಗಿದೆ.
ಸ್ಫೋಟದ ನಂತರ ನಾಪತ್ತೆಯಾಗಿದ್ದ ಶ್ರವಣ್ ಅವರ ಮೃತದೇಹ ಸ್ಫೋಟದ ಸ್ಥಳದಲ್ಲಿಯೇ ಪತ್ತೆಯಾಗಿದೆ ಎಂದು ಅವರು ಹೇಳಿದರು.
ಗಾಯಗೊಂಡ ಕಾರ್ಮಿಕ ಉಮೇಶ್ ರಾಣಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರತಾ ಸಿಬ್ಬಂದಿಯಿಂದ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement